ಬೀದರ್‌(ಏ.01): ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ್‌ ಹಾಗೂ ಅವರ ಸಹೋದರ ಸಂಬಂಧಿಗಳ ಮಧ್ಯದ ಆಸ್ತಿ ವಿವಾದ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಅಲ್ಲಿ ಸೇರಿದ್ದ ಜನರನ್ನು ಚದುರಿಸಿ ಅಹಿತಕರ ಘಟನೆ ನಡೆಯದಂತೆ ಪಿಎಸ್‌ಐ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಘಟನೆ ನಡೆದಿದೆ.

ಹುಮನಾಬಾದ್‌ ಪಟ್ಟಣದ ನಾಗನಾಗೇಶ್ವರಿ ಲಾಡ್ಜ್‌ ಬಳಿ ಬುಧವಾರ ಮಧ್ಯಾಹ್ನ 2ರ ಸುಮಾರಿಗೆ ಈ ಘಟನೆ ನಡೆದಿದೆ. ಶಾಸಕ ರಾಜಶೇಖರ ಪಾಟೀಲ್‌ ತಮ್ಮ ಖಾಸಗಿ ನಿವೇಶನ ಹಾಗೂ ಅಲ್ಲಿರುವ ಸರ್ಕಾರಿ ಸ್ಥಳದ ಸರ್ವೆ ಮಾಡಿಸಲು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ತೆರಳಿದ್ದರು. ಪಕ್ಕದಲ್ಲಿಯೇ ಇದ್ದ ಲಾಡ್ಜ್‌ ಮಾಲೀಕರಾದ ಶಾಸಕ ಪಾಟೀಲ್‌ ಸಹೋದರ ಸಂಬಂಧಿ ಸಿದ್ದು ಪಾಟೀಲ್‌ ಅವರು ಸ್ಥಳಕ್ಕಾಗಮಿಸಿದಾಗ ಮಾತಿನ ಚಕಮಕಿ ಆರಂಭವಾಗಿದೆ.

ಮಾತಿನ ಚಕಮಕಿ:

ಶಾಸಕರ ಸದರಿ ನಿವೇಶನದಲ್ಲಿ ಸಿದ್ದು ಪಾಟೀಲ್‌ ಅವರ ಕಟ್ಟಡದ ಒಂದಷ್ಟು ಭಾಗ ನಿರ್ಮಾಣವಾಗಿದೆ ಎಂಬ ಆರೋಪ ಮಾತಿನ ಚಕಮಕಿಗೆ ಕಾರಣವಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಿದ್ದು ಪಾಟೀಲ್‌ ಸಹೋದರಾದ ಸಂತೋಷ ಹಾಗೂ ಶರಣಪ್ಪ ಪಾಟೀಲ್‌ ಸ್ಥಳಕ್ಕೆ ಆಗಮಿಸಿದ್ದಾರೆ. ಜೊತೆಗೆ ಶಾಸಕ ಪಾಟೀಲ್‌ ಸಹೋದರರಾದ ಎಂಎಲ್‌ಸಿ ಡಾ.ಚಂದ್ರಶೇಖರ ಪಾಟೀಲ್‌ ಹಾಗೂ ಭೀಮರಾವ್‌ ಪಾಟೀಲ್‌ ದೌಡಾಯಿಸಿದಾಗ ಮಾತಿಗೆ ಮಾತು ಬೆಳೆದಿದೆ.
ಶಾಸಕರ ಹಾಗೂ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ಸಿದ್ದು ಪಾಟೀಲ್‌ ಬೆಂಬಲಿಗರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಲಾರಂಭಿಸುತ್ತಲೇ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಪಡೆದ ಪಿಎಸ್‌ಐ ರವಿಕುಮಾರ ಪರಿಸ್ಥಿತಿ ತಿಳಿಗೊಳಿಸಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.

ಬಸವಕಲ್ಯಾಣ ಬೈಎಲೆಕ್ಷನ್‌: ಬಂಡಾಯದ ಭೂತ; ಮೂರು ಪಕ್ಷಗಳಲ್ಲಿ ಮತವಿಭಜನೆ ಆತಂಕ..!

ದೂರು ಪ್ರತಿ ದೂರು:

ಈ ಕುರಿತಂತೆ ದೂರು ಪ್ರತಿ ದೂರು ದಾಖಲಾಗಿದೆ. ಹಲ್ಲೆಗೆ ಯತ್ನ, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕೊಲೆ ಬೆದರಿಕೆಯ ಆರೋಪಗಳನ್ನು ಮಾಡಲಾಗಿದ್ದು, ಹುಮನಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಎಸ್‌ಪಿ ನಾಗೇಶ ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ.

ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ್‌ ಇದ್ದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎರಡೂ ಕಡೆಯ ಬೆಂಬಲಿಗರು ಸೇರಲಾರಂಭಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಪಡೆದ ಪಿಎಸ್‌ಐ ರವಿಕುಮಾರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಜನರನ್ನು ಚದುರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಬೀದರ್‌ ಎಸ್‌ಪಿ ನಾಗೇಶ ಡಿಎಲ್‌ ತಿಳಿಸಿದ್ದಾರೆ. 

ನನ್ನ ಖಾಸಗಿ ನಿವೇಶನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಕದ ನಿವೇಶನದ ಮಾಲೀಕರು ಅತಿಕ್ರಮಣ ಮಾಡಿದ್ದನ್ನು ಸರ್ವೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಸಿದ್ದು ಪಾಟೀಲ್‌, ಸಂತೋಶ ಪಾಟೀಲ್‌ ಮತ್ತಿತರರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಶಾಸಕ ಸ್ಥಾನಕ್ಕೂ ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ನನ್ನ ಮೇಲೆ ಹಲ್ಲೆಗೆ ಯತ್ನಿಸುವಂತೆ ಹೆಜ್ಜೆಯಿಟ್ಟಿದ್ದರು. ನನ್ನ ನಿವೇಶನ ಹಾಗೂ ಪಕ್ಕದಲ್ಲಿನ ಸರ್ಕಾರಿ ಸ್ಥಳವನ್ನು ಗುರುತಿಸಿ ಹದ್ದುಬಸ್ತು ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ್‌ ಹೇಳಿದ್ದಾರೆ. 

ಜಮೀನು ಸರ್ವೆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಾವಳಿಗಳನ್ನು ಪಾಲಿಸಿಲ್ಲ. ಯಾವುದೇ ರೀತಿಯ ನೋಟಿಸ್‌ ನಮಗೆ ನೀಡಿಲ್ಲ. ಅನಗತ್ಯವಾಗಿ ನಮ್ಮ ಮೇಲೆ ಅಕ್ರಮದ ಆರೋಪ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಶಾಸಕರು ಹಾಗೂ ಅವರ ಸಹೋದರರಿಂದ ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತಂತೆ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಪೊಲೀಸರಿಗೆ ದೂರು ನೀಡಿ ಮನವಿ ಸಲ್ಲಿಸಿದ್ದೇವೆ ಎಂದು ಬಿಜೆಪಿ ಮುಖಂಡ ಸಿದ್ದು ಪಾಟೀಲ್‌ ತಿಳಿಸಿದ್ದಾರೆ.