ಬೆಂಗಳೂರು(ಮಾ.27): ಪ್ರಕರಣವೊಂದರ ಸಂಬಂಧ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ ಕಾಲಿಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಗುಂಡು ಹಾರಿಸಿ ಗುರುವಾರ ತಡರಾತ್ರಿ ಬಂಧಿಸಿದ್ದಾರೆ. ರೌಡಿಶೀಟರ್‌ ಧನುಷ್‌ ಅಲಿಯಾಸ್‌ ಧಡಿಯ ಗುಂಡೇಟು ತಿಂದವನು. ಘಟನೆಯಲ್ಲಿ ಕಾನ್‌ಸ್ಟೇಬಲ್‌ ಲೋಕೇಶ್‌ ಎಂಬುವರಿಗೆ ಗಾಯಗಳಾಗಿವೆ.

ಆರೋಪಿ ಗ್ಯಾಂಗ್‌ ಮಾ.23ರಂದು ಮಾರುತಿ ನಗರ ನಿವಾಸಿ ಮಂಜುನಾಥ್‌ ಅಲಿಯಾಸ್‌ ಧಡಿಯ ಮಂಜ (37) ಎಂಬಾತನನ್ನು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದವನಿಗೆ ಗುಂಡೇಟು

ಧನುಷ್‌ ಸಿ.ಕೆ.ಅಚ್ಚುಕಟ್ಟು ಠಾಣೆ ರೌಡಿ ಶೀಟರ್‌ ಆಗಿದ್ದು, ಈತನ ಮೇಲೆ ಕೊಲೆ, ಕೊಲೆ ಯತ್ನ ಸೇರಿದಂತೆ ನಗರದ ವಿವಿಧ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳಿವೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯ ತಂಡ ಮಂಜುನಾಥ್‌ ಎಂಬುವನನ್ನು ಹತ್ಯೆ ಮಾಡಿ, ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿತ್ತು. ಆರೋಪಿ ಹನುಮಗಿರಿ ಬೆಟ್ಟದಲ್ಲಿ ಅವಿತುಕೊಂಡಿರುವ ಬಗ್ಗೆ ಗುರುವಾರ ರಾತ್ರಿ 12ರ ಸುಮಾರಿಗೆ ಇನ್‌ಸ್ಪೆಕ್ಟರ್‌ ಪಿ.ಆರ್‌.ಜನಾರ್ದನ ಅವರಿಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ತಮ್ಮ ಸಿಬ್ಬಂದಿ ಜತೆ ಆರೋಪಿಗಳಿದ್ದ ಸ್ಥಳಕ್ಕೆ ತೆರಳಿದ್ದರು.

ಆರೋಪಿಯನ್ನು ಬಂಧಿಸಲು ಮುಂದಾದ ಕಾನ್‌ಸ್ಟೇಬಲ್‌ ಲೋಕೇಶ್‌ ಮೇಲೆ ಧನುಷ್‌ ಹಲ್ಲೆ ನಡೆಸಿದ್ದ. ಇನ್‌ಸ್ಪೆಕ್ಟರ್‌ ಜನಾರ್ಧನ್‌ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆರೋಪಿ ಮಾತು ಕೇಳದಿದ್ದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖನಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.