ಬೆಂಗಳೂರು(ಫೆ.13): ಕಳವು ಮಾಡಿದ್ದ ಕಾರಿನಲ್ಲಿ ಯುವತಿಯೊಬ್ಬಳನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಯಲಹಂಕ ನ್ಯೂಟೌನ್‌ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲ ನಿವಾಸಿ ಇಮ್ರಾನ್‌ ಪಾಷಾ (26) ಬಂಧಿತ. ಈತನ ಸಹಚರ ಮುರುಳಿಯನ್ನು (21) ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಕಾನ್‌ಸ್ಟೇಬಲ್‌ ಮಧುಕುಮಾರ್‌ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತ ಇಮ್ರಾನ್‌ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ, ಅತ್ಯಾಚಾರ ಸೇರಿದಂತೆ 15 ಅಪರಾಧ ಪ್ರಕರಣಗಳು ದಾಖಲಾಗಿವೆ.

ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ: ರೌಡಿಶೀಟರ್‌ ಕಾಲಿಗೆ ಗುಂಡೇಟು

ಬುಧವಾರ ರಾತ್ರಿ 12.30ರ ವೇಳೆ ನಾಗರಾಜು ಕಾರಿನಲ್ಲಿ ದೇವನಹಳ್ಳಿ ರಸ್ತೆ ಕೋಗಿಲು ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ನಗದು, ಮೊಬೈಲ್‌ ಎಟಿಎಂ ಕಾರ್ಡ್‌ ಮತ್ತು ಕಾರು ಸುಲಿಗೆ ಮಾಡಿದ್ದರು. ಬಳಿಕ ಅದೇ ಕಾರಿನಲ್ಲಿ ಆರೋಪಿಗಳು ಮದ್ಯ ಸೇವನೆ ಮಾಡುತ್ತಾ ಕೆಂಚನಹಳ್ಳಿ ರಸ್ತೆಯಲ್ಲಿ ನಿಂತಿದ್ದರು. ಬೆಳಗಿನ ಜಾವ 4.30ರಲ್ಲಿ ಮನೆ ಕೆಲಸದಾಕೆ ಕೆಲಸಕ್ಕಾಗಿ ಹೋಗುತ್ತಿದ್ದಾಗ ಆಕೆಯನ್ನು ಕಾರಿಗೆ ಎಳೆದುಕೊಂಡು ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಶಬರೀಶ್‌ ಗ್ಯಾಂಗ್‌ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಗುರುವಾರ ಶಬರೀಶ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಇಮ್ರಾನ್‌ ಮತ್ತು ಮುರುಳಿ ತಪ್ಪಿಸಿಕೊಂಡಿದ್ದರು. ಕಾರು ಮತ್ತು ಶಬರೀಶ್‌ ಫೋಟೋ ಗುರುತು ಹಿಡಿದ ಸಂತ್ರಸ್ತೆ, ಯಲಹಂಕ ನ್ಯೂಟೌನ್‌ ಠಾಣೆಗೆ ದೂರು ನೀಡಿದ್ದರು. ಎಂ.ಎಸ್‌.ಪಾಳ್ಯ ಜಂಕ್ಷನ್‌ನಲ್ಲಿ ಇಮ್ರಾನ್‌ ಬೈಕ್‌ನಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಯಲಹಂಕ ನ್ಯೂಟೌನ್‌ ಇನ್‌ಸ್ಪೆಕ್ಟರ್‌ ಆರೋಪಿ ಬಂಧನಕ್ಕೆ ಮುಂದಾಗಿದ್ದರು. ಬಂಧನಕ್ಕೆ ತೆರಳಿದ ವೇಳೆ ಆರೋಪಿ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಇನ್‌ಸ್ಪೆಕ್ಟರ್‌ ಗುಂಡು ಹಾರಿಸಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.