ಬೆಂಗಳೂರು(ಜ.20): ರಾಜಧಾನಿಯಲ್ಲಿ ರೌಡಿಗಳ ವಿರುದ್ಧ ಖಾಕಿ ಕಾರ್ಯಾಚರಣೆ ಮುಂದುವರೆದಿದ್ದು, ಎದುರಾಳಿ ಹತ್ಯೆಗೆ ಹೊಂಚು ಹಾಕಿದ್ದ ಮತ್ತೊಬ್ಬ ಕಿಡಿಗೇಡಿಯೊಬ್ಬನಿಗೆ ಪೀಣ್ಯ ಠಾಣೆ ಪೊಲೀಸರು ಗುಂಡು ಹೊಡೆದು ಮಂಗಳವಾರ ಬಂಧಿಸಿದ್ದಾರೆ.

"

ಅಂದ್ರಹಳ್ಳಿಯ ರಾಘವೇಂದ್ರ ನಗರದ ಪ್ರವೀಣ್‌ಗೆ ಗುಂಡೇಟು ಬಿದ್ದಿದ್ದು, ತನ್ನ ಶತ್ರು ಅಂದ್ರಹಳ್ಳಿಯ ಅಭಿಷೇಕ್‌ ಹತ್ಯೆಗೆ ಆತ ಹೊಂಚು ಹಾಕಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್‌ಐ ಮಾರಪ್ಪ ಬಿರಾಣಿ ಅವರು ಆರೋಪಿ ಬಂಧನಕ್ಕೆ ತೆರಳಿದ್ದಾಗ ತಿರುಗಿ ಬಿದ್ದಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಪಿಎಸ್‌ಐ ಹಾರಿಸಿದ ಗುಂಡು ಆರೋಪಿ ಬಲಗಾಲಿಗೆ ಹೊಕ್ಕಿದೆ. ಈ ಕಾರ್ಯಾಚರಣೆ ವೇಳೆ ಹೆಡ್‌ ಕಾನ್‌ಸ್ಟೇಬಲ್‌ ರಂಗಸ್ವಾಮಿ ಅವರಿಗೆ ಪೆಟ್ಟಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ತಿಳಿಸಿದ್ದಾರೆ.

ವಾರದ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್

ಸ್ಲಂ ಭರತ ಬಳಿಕ ಹಾವಳಿ ಶುರು:

ಹಲವು ದಿನಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಪ್ರವೀಣ್‌ ಸಕ್ರಿಯವಾಗಿದ್ದು, ಆತನ ಮೇಲೆ ಬ್ಯಾಡರಹಳ್ಳಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಆರ್‌ಎಸ್‌ ಲೇಔಟ್‌ನ ರೌಡಿ ಅನಿಲ್‌ಕುಮಾರ್‌ ಸಹಚರನಾಗಿದ್ದ ಪ್ರವೀಣ್‌, ಕುಖ್ಯಾತ ಪಾತಕಿ ಸ್ಲಂ ಭರತ್‌ ಎನ್‌ಕೌಂಟರ್‌ ಆದ ಬಳಿಕ ಆ ಪ್ರದೇಶದಲ್ಲಿ ‘ಹವಾ’ ಸೃಷ್ಟಿಸಲು ಆರಂಭಿಸಿದ್ದ. ಇದಕ್ಕೆ ಸ್ಲಂ ಭರತನ ಶಿಷ್ಯ ಅಂದ್ರಹಳ್ಳಿಯ ಅಭಿಷೇಕ್‌ ಅಲಿಯಾಸ್‌ ಅಭಿ ಎಂಬಾತನ ವಿರೋಧವಿತ್ತು. ಇದರಿಂದ ಕೆರಳಿ ಅನಿಲ್‌ ಸೂಚನೆ ಮೇರೆಗೆ ಅಭಿ ಕೊಲೆಗೆ ಪ್ರವೀಣ್‌ ಗ್ಯಾಂಗ್‌ ಹೊಂಚು ಹಾಕಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೀಣ್ಯ ಪೊಲೀಸರು, ಜ.16ರಂದು ತಿಪ್ಪೇನಹಳ್ಳಿಯ ನೀಲಗಿರಿ ಅರಣ್ಯ ಬಳಿ ಅನಿಲ್‌ನ ಮೂವರು ಸಹಚರರನ್ನು ಬಂಧಿಸಿದ್ದರು. ಬಳಿಕ ಅವರಿಂದ ಎರಡು ಕೆ.ಜಿ ಗಾಂಜಾ ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿತ್ತು. ಈ ವೇಳೆ ತಲೆಮರೆಸಿಕೊಂಡಿದ್ದ ಪ್ರವೀಣ್‌ ಪತ್ತೆಗೆ ತನಿಖಾ ತಂಡ ಬೆನ್ನಹತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಿಪ್ಪೇನಹಳ್ಳಿ ಸಮೀಪ ನಿರ್ಮಾಣ ಹಂತದ ಕಟ್ಟಡದ ಕಾಂಪೌಂಡ್‌ ಬಳಿ ಮುಂಜಾನೆ 4.30ರ ಸುಮಾರಿನಲ್ಲಿ ಪ್ರವೀಣ್‌ ಅಡಗಿರುವ ಬಗ್ಗೆ ಪಿಎಸ್‌ಐ ಮಾಯಪ್ಪ ಬಿರಾಣಿ ತಂಡಕ್ಕೆ ಮಾಹಿತಿ ಸಿಕ್ಕಿತು. ಕೂಡಲೇ ಅವರು ತಮ್ಮ ತಂಡದೊಂದಿಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಆಗ ತನಿಖಾ ತಂಡದ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಪ್ರವೀಣ ಯತ್ನಿಸಿದ್ದಾನೆ. ಈ ಹಂತದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ರಂಗಸ್ವಾಮಿ ಅವರಿಗೆ ಗಾಯವಾಗಿದೆ. ತಕ್ಷಣವೇ ಎಚ್ಚೆತ್ತ ಮಾಯಪ್ಪ ಅವರು, ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಈ ಮಾತಿಗೆ ಬಗ್ಗದೆ ಹೋದಾಗ ತಮ್ಮ ಸರ್ವಿಸ್‌ ಪಿಸ್ತೂಲ್‌ನಿಂದ ಹಾರಿಸಿದ ಗುಂಡು ಪ್ರವೀಣ್‌ ಬಲಗಾಲಿಗೆ ಹೊಕ್ಕು ಕುಸಿದು ಬಿದ್ದನು. ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.