ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಹೋಗುವವರಿಗೆ ಸಹಾಯ ಮಾಡುವ ನೆಪದಲ್ಲಿ ಡೆಬಿಟ್ ಕಾರ್ಡ್ ಬದಲಿಸಿ ಪಿನ್ ನಂಬರ್ ತಿಳಿದುಕೊಂಡು ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದವನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.03): ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಹೋಗುವವರಿಗೆ ಸಹಾಯ ಮಾಡುವ ನೆಪದಲ್ಲಿ ಡೆಬಿಟ್ ಕಾರ್ಡ್ ಬದಲಿಸಿ ಪಿನ್ ನಂಬರ್ ತಿಳಿದುಕೊಂಡು ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದವನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಅಟ್ಟೂರು ಲೇಔಟ್ ನಿವಾಸಿ ಮಲ್ಲಿನಾಥ್ ಅಂಗಡಿ (32) ಬಂಧಿತ. ಈತನಿಂದ ನಾಲ್ಕು ಚಿನ್ನದ ಸರ, ಮೂರು ಚಿನ್ನದ ಉಂಗುರ ಸೇರಿ ಒಟ್ಟು 75 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಯಲಹಂಕ 4ನೇ ಹಂತದ ನಿವಾಸಿ ಎಂ.ಜಿ.ರಾಮಕೃಷ್ಣೇಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ: ಹೆಂಡತಿ ಬಗ್ಗೆ ಕೆಟ್ಟದಾಗಿ ಬೈದ ಸ್ನೇಹಿತನ ಕೊಲೆ
ಪ್ರಕರಣದ ವಿವರ: ನಿವೃತ್ತ ಸರ್ಕಾರಿ ನೌಕರ ಎಂ.ಜಿ.ರಾಮಕೃಷ್ಣೇಗೌಡ ಎರಡು ತಿಂಗಳ ಹಿಂದೆ ಕೆನರಾ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆದು ಡೆಬಿಡ್ ಕಾರ್ಡ್ ಪಡೆದಿದ್ದರು. ಹಣ ಡ್ರಾ ಮಾಡಲು ಮೇ 21ರಂದು ಯಲಹಂಕ ನ್ಯೂಟೌನ್‌ನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ತೆರಳಿದ್ದರು. ಡೆಬಿಟ್ ಕಾರ್ಡ್ ಹೊಸದಾಗಿದ್ದರಿಂದ ಪಿನ್ ಜನರೇಟ್ ಮಾಡುವಂತೆ ಮೊಬೈಲ್‌ಗೆ ಸಂದೇಶ ಬಂದಿದೆ. ಈ ವೇಳೆ ರಾಮಕೃಷ್ಣೇಗೌಡ ಅವರು ಪಿನ್ ಜನರೇಟ್ ಮಾಡಲು ಪ್ರಯತ್ನಿಸುವಾಗ ಅಪರಿಚಿತ ವ್ಯಕ್ತಿ ಒಳಬಂದು ಪಿನ್ ಜನರೇಟ್ ಮಾಡಿ 40 ಸಾವಿರ ರು. ಹಣವನ್ನು ಡ್ರಾ ಮಾಡಿ ರಾಮಕೃಷ್ಣೇಗೌಡರಿಗೆ ಡೆಬಿಟ್ ಕಾರ್ಡ್ ಹಾಗೂ ಹಣವನ್ನು ನೀಡಿ ತೆರಳಿದ್ದ.
ಜೂನ್ 13ರಂದು ರಾಮಕೃಷ್ಣೇಗೌಡ ಅವರು ಎಟಿಎಂ ಕೇಂದ್ರಕ್ಕೆ ತೆರಳಿ ಹಣ ಡ್ರಾ ಮಾಡಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಬಳಿಕ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿದ್ದ 8.51 ಲಕ್ಷ ರು. ಹಣ ಡ್ರಾ ಆಗಿರುವುದು ಗೊತ್ತಾಗಿದೆ. ಅಲ್ಲದೆ, ಡೆಬಿಡ್ ಕಾರ್ಡ್ ಅಸಲಿ ಅಲ್ಲ ಎಂಬ ವಿಷಯ ಗೊತ್ತಾಗಿದೆ. ಬಳಿಕ ತಾನು ಮೋಸ ಹೋಗಿರುವುದು ಅರಿವಾಗಿ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಟಿಎಂ ಕೇಂದ್ರ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮದ ತೀಟೆಗೆ ಮಹಿಳೆಯ ಗಂಡನನ್ನು ಕೊಂದ ಪ್ರಿಯಕರ, ಅಕ್ರಮ ಸಂಬಂಧದ ರಹಸ್ಯ ಬಯಲು
ಪೊಲೀಸರಿಂದ ಸಾರ್ವಜನಿಕರಿಗೆ ಸೂಚನೆ:
* ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುವಾಗ ಸಹಾಯಕ್ಕೆ ಅಪರಿಚಿತ ವ್ಯಕ್ತಿಗಳನ್ನು ಕರೆಯಬಾರದು.
* ಅಪರಿಚಿತರು ಪಿನ್ ನಂಬರ್ ನೋಡುವ, ಗಮನ ಬೇರೆಡೆ ಸೆಳೆದು ಡೆಬಿಟ್ ಕಾರ್ಡ್ ಬದಲಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರವಿರಬೇಕು.
* ಎಟಿಎಂ ಕೇಂದ್ರದಲ್ಲಿ ರಹಸ್ಯ ಕ್ಯಾಮರಾ ಅಳವಡಿಸುವ ಸಾಧ್ಯತೆಯಿದೆ. ಹೀಗಾಗಿ ಅಂಗೈ ಮುಚ್ಚಿಕೊಂಡು ಪಿನ್ ದಾಖಲಿಸಬೇಕು.
* ವಿನಾಕಾರಣ ನೂಕುನುಗ್ಗಲು ಉಂಟು ಮಾಡಿ ಡೆಬಿಡ್ ಕಾರ್ಡ್ ಬದಲಿಸಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಡೆಬಿಡ್ ಕಾರ್ಡ್‌ಗಳನ್ನು ಭದ್ರವಾಗಿ ಇರಿಸಿಕೊಳ್ಳಬೇಕು.
