ಬೆಂಗಳೂರು(ಮೇ.23): ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಹೊರ ರಾಜ್ಯದ ಇಬ್ಬರು ಮಹಿಳಾ ಕಾರ್ಮಿಕರಿಗೆ ರಕ್ಷಣೆ ನೀಡುವ ಸೋಗಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ದುಷ್ಕರ್ಮಿಯನ್ನು ಕೆಂಗೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಜಾರ್ಖಂಡ್‌ ಮೂಲದ ಅಸ್ಗರ್‌ ಅಲಿ ಮುಸ್ತಾಫ ಬಂಧಿತನಾಗಿದ್ದು, ಆತನ ವಶದಲ್ಲಿದ್ದ ಮಹಿಳಾ ಕಾರ್ಮಿಕರು ಹಾಗೂ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಶೋಷಣೆ ಕುರಿತು ಜಾರ್ಖಂಡ್‌ ಮೂಲದ ಎನ್‌ಜಿಓ ಕಾರ್ಯಕರ್ತರೊಬ್ಬರು, ಟ್ವಿಟರ್‌ನಲ್ಲಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು.

ಮದುವೆಗೆ ಒಪ್ಪದ ಪ್ರಿಯತಮ: ವಿಷ ಸೇವಿಸಿ ಠಾಣೆಗೆ ಹೋದ ವಿಚ್ಛೇದಿತ ಮಹಿಳೆ!

ಸಂತ್ರಸ್ತೆಯರು ಜಾರ್ಖಂಡ್‌ ರಾಜ್ಯದವರಾಗಿದ್ದು, ಕುಂಬಳಗೋಡು ಸಮೀಪ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೇ ರಾಜ್ಯದವರಾದ ಕಾರಣ ಆರೋಪಿಗೆ ಆ ಮಹಿಳೆಯರು ಪರಿಚಿತರಾಗಿದ್ದರು. ಲಾಕ್‌ಡೌನ್‌ ಘೋಷಣೆ ಬಳಿಕ ಮಹಿಳೆಯರು ಕೆಲಸ ಮಾಡುತ್ತಿದ್ದ ಕಾರ್ಖಾನೆ ಬಾಗಿಲು ಬಂದ್‌ ಮಾಡಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಅವರಿಗೆ ನೆರವು ನೀಡುವ ಸೋಗಿನಲ್ಲಿ ತೆರಳಿದ ಅಲಿ, ಕೆಂಗೇರಿ ಸಮೀಪ ನಿರ್ಮಾಣ ಹಂತದ ಕಟ್ಟಡದ ಆವರಣದಲ್ಲಿ ಆಶ್ರಯ ಕಲ್ಪಿಸುವುದಾಗಿ ಹೇಳಿ ಸಂತ್ರಸ್ತೆಯನ್ನು ಕರೆ ತಂದಿದ್ದ. ನಂತರ ಅವರನ್ನು ಲೈಂಗಿಕವಾಗಿ ಶೋಷಿಸಲಾರಂಭಿಸಿದ್ದ. ಈ ದೌರ್ಜನ್ಯ ಸಹಿಸಲಾರದೆ ಅವರು, ಕೊನೆಗೆ ಜಾರ್ಖಂಡ್‌ ರಾಜ್ಯದಲ್ಲಿನ ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದರು. 
ಬಳಿಕ ಎನ್‌ಓಜಿ ಸಹಾಯವನ್ನು ಅವರು ಕೋರಿದ್ದರು. ಈ ಸಂಗತಿ ತಿಳಿದ ಎನ್‌ಜಿಒ ಕಾರ್ಯಕರ್ತ, ಶನಿವಾರ ಮಧ್ಯಾಹ್ನ ಬೆಂಗಳೂರು ಪೊಲೀಸರಿಗೆ ಟ್ವಿಟರ್‌ನಲ್ಲಿ ದೂರು ಸಲ್ಲಿಸಿದ್ದರು.