ಬೆಂಗಳೂರು(ಜು.14):  ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಕೆಲಸ ಖಾಲಿ ಇದೆ ಎಂದು ಯಾವುದಾದರೂ ವೆಬ್‌ಸೈಟ್‌ಗೆ ಲಗ್ಗೆ ಇಟ್ಟರೆ ಹಣ ಹೋಗುತ್ತೆ ಜೋಕೆ..! ಹೌದು, ಕೆಲಸ ಕಳೆದುಕೊಳ್ಳುವ ಭೀತಿಯಿಂದ ಲೈಂಗಿಕ ಕ್ರಿಯೆ ನಡೆಸುವ ಕೆಲಸಕ್ಕೆ ಒಪ್ಪಿದ ಟೆಕ್ಕಿ ಇದೀಗ ಹಣ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. 26 ವರ್ಷದ ಅಮೃತ್‌ಹಳ್ಳಿ ನಿವಾಸಿ ಸಾಫ್ಟ್‌ವೇರ್‌ ಉದ್ಯೋಗಿ ಹಣ ಕಳೆದುಕೊಂಡಿದ್ದು, ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ಟೆಕ್ಕಿ ಮಾನ್ಯತಾ ಟೆಕ್‌ಪಾರ್ಕ್‌ನ ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ ಕೆಲಸಕ್ಕಿದ್ದಾರೆ. ಲಾಕ್‌ಡೌನ್‌ ಪರಿಣಾಮ ಕಂಪನಿಯಲ್ಲಿನ ಕೆಲ ಸಿಬ್ಬಂದಿಯನ್ನು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿತ್ತು. ಮುಂಬರುವ ದಿನಗಳಲ್ಲಿ ನನ್ನನ್ನು ಸಹ ಕೆಲಸದಿಂದ ತೆಗೆದು ಹಾಕಬಹುದು ಎಂಬ ಆತಂಕದಿಂದ ಟೆಕ್ಕಿ ಬೇರೆ ಕಂಪನಿಯಲ್ಲಿ ಕೆಲಸ ಹುಡುಕಾಡಲು ಪ್ರಯತ್ನಿಸಿದ್ದರು. ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುವಾಗ ವೆಬ್‌ಸೈಟ್‌ವೊಂದಕ್ಕೆ ಟೆಕ್ಕಿ ಲಾಗಿನ್‌ ಆಗಿದ್ದರು. ವೆಬ್‌ಸೈಟ್‌ನಲ್ಲಿರುವ ಮೊಬೈಲ್‌ ಸಂಖ್ಯೆಗಳಿಗೆ ಟೆಕ್ಕಿ ಕರೆ ಮಾಡಿ ಉದ್ಯೋಗದ ಬಗ್ಗೆ ವಿಚಾರಿಸಿದ್ದರು.

ಬಣ್ಣದ ಮಾತಿಗೆ ಮರುಳಾದ ಯುವತಿ..! ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ

ಈ ವೇಳೆ ಮಹಿಳೆಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಕೆಲಸ ಇದೆ. ಇದಕ್ಕಾಗಿ ವೇತನ ಕೂಡ ಪಾವತಿಸಲಾಗುತ್ತದೆ ಎಂದು ಪ್ರತಿಕ್ರಿಯೆ ಬಂದಿದೆ. ಈ ಕೆಲಸಕ್ಕೆ ಟೆಕ್ಕಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸೈಬರ್‌ ವಂಚಕರು ನೋಂದಣಿ ಶುಲ್ಕ ಸಾವಿರ ರುಪಾಯಿಯನ್ನು ಪಾವತಿಸಬೇಕು ಎಂದಿದ್ದರು. ಬಳಿಕ ಕಂಪನಿಯ ಸದಸ್ಯತ್ವಕ್ಕಾಗಿ 12,500 ಹಾಗೂ ಸ್ಟೇಟಸ್‌ ಕನ್ಫರ್ಮೇಶನ್‌ ಕೋಡ್‌ ಶುಲ್ಕ ಎಂದು 70 ಸಾವಿರ ಸೇರಿ ಒಟ್ಟು 83,500 ಹಾಕಿಸಿಕೊಂಡಿದ್ದಾರೆ. ಹಣವನ್ನು ಮರಳಿಸದೆ, ಇತ್ತ ಉದ್ಯೋಗವೂ ಕೊಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಟೆಕ್ಕಿ ದೂರು ನೀಡಿದ್ದಾರೆ.

ಟೆಕ್ಕಿ ನೀಡಿರುವ ದೂರು ದಾಖಲಿಸಿಕೊಂಡು ಆರೋಪಿಗಳ ಮೊಬೈಲ್‌ ಕರೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.