ಕಲಬುರಗಿ(ಫೆ.06): ಜಿಲ್ಲಾ ಎಸ್ಪಿ ಹೆಸರು ಪ್ರಸ್ತಾಪಿಸುತ್ತ, ಪ್ರಭಾವಿ ರಾಜಕೀಯ ನಾಯಕರೆಲ್ಲರೂ ತನಗೆ ಗೊತ್ತೆಂದು ಬಿಲ್ಡಪ್‌ ನೀಡುತ್ತ, ಸ್ಥಳೀಯ ಟಿವಿ ಚಾನೆಲ್‌ ವರದಿಗಾರನೆಂದು ಹೇಳಿಕೊಂಡು ಓಡಾಡಿಕೊಂಡಿದ್ದ ಖಾಸೀಂ ಪಟೇಲ್‌ ಎಂಬ ವ್ಯಕ್ತಿ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ (ಸದ್ಯ ಕಲಬುರಗಿ ನಗರ ಡಿಸಿಐಬಿಯಲ್ಲಿ ಪಿಎಸ್‌ಐ) ಪಿಎಸ್‌ಐ ಆಗಿರುವ ಮಂಜುನಾಥ ಹೂಗಾರ್‌ ಇವರನ್ನು ಯಾಮಾರಿಸಿ 8.50 ಲಕ್ಷ ರು. ಹಣ ಪಡೆದಂತಹ ವಿಲಕ್ಷಣ ಪ್ರಸಂಗ ನಡೆದಿದೆ.

ಪಿಎಸ್‌ಐಗೆ ಚಳ್ಳೆಹಣ್ಣು ತಿನ್ನಿಸಿರುವ ಖಾಸೀಂ ಪಟೇಲ್‌ ವಿರುದ್ಧ ಐಪಿಸಿ ಕಲಂ 419, 420 ಮತ್ತು 66 (ಡಿ) ಐಟಿ ಕಾಯಿದೆಯಡಿ ಫೆ. 4 ರಂದು ಪ್ರಕರಣ ದಾಖಲಿಸಿ ಮೋಸ- ವಂಚನೆ ಮಾಡಿರುವ ದೂರಿನ ಆಧಾರದಲ್ಲಿ ಆತನನ್ನು ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್‌ ಬಳಿ ಸಂಜೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್‌ ಕಮೀಷ್ನರ್‌ ಸತೀಶ ಕುಮಾರ್‌ ಹೇಳಿದ್ದಾರೆ.

ಈ ಮೋಸದ ಪ್ರಕರಣದ ಬಗ್ಗೆ ಖುದ್ದು ಪಿಎಸ್‌ಐ ಮಂಜುನಾಥ ದೂರು ಸಲ್ಲಿಸಿದ್ದು ಅದರಲ್ಲಿ ಸಂಪೂರ್ಣ ವಿವರಣೆ ನೀಡಿದ್ದಾರೆ. ಕಲಬುರಗಿ ಡಿಸಿಐಬಿಗೆ ವರ್ಗವಾಗಿ ಬರುವ ಮುನ್ನ ಮಂಜುನಾಥ ಹೂಗಾರ್‌ ಇವರು ಜೇವರ್ಗಿಯಲ್ಲಿ ಕೆಲಸದಲ್ಲಿದ್ದಾಗ ಪರಿಚಯವಾಗಿದ್ದ ಖಾಸೀಂ ಪಟೇಲ್‌ ತಾನು ಪ್ರಭಾವಿ ವ್ಯಕ್ತಿ ಎಂಬುದಕ್ಕೆ ತನ್ನ ಬಳಿ ಇರುವ ಗಣ್ಯ ವ್ಯಕ್ತಿಗಳ ಜೊತೆಗಿರುವ ಫೋಟೋಗಳು, ಜಿಲ್ಲಾ ಪೊಲೀಸ್‌ ಹಿರಿಯ ಅಧಿಕಾರಿಗಳ ಜೊತೆಗಿರುವ ಪೋಟೋಗಳನ್ನು ತೋರಿಸಿ ನಂಬಿಸಿದ್ದ.

ಗಣರಾಜ್ಯೋತ್ಸವ ಪರೇಡ್‌ಗೆ ತಡ ಮಾಡಿದ ಐವರು ಪೊಲೀಸರು ಸಸ್ಪೆಂಡ್‌

ಕಳೆದ ನವ್ಹೆಂಬರ್‌ ತಿಂಗಳ 19 ರಂದು ಖಾಸೀಂ ಪಟೇಲ್‌ ಈತ ಪಿಎಸ್‌ಐ ಮಂಜುನಾಥ ಹೂಗಾರ್‌ ಬಳಿ ಬಂದು ತನ್ನ ಬಳಿ ಜಿಲ್ಲಾ ಎಸ್ಪಿಯವರ ಅತ್ಯಂತ ಖಾಸಗಿ ಮೋಬೈಲ್‌ ನಂಬರ್‌ ಇದೆ ಎಂದು ಹೇಳುತ್ತ ಕಾನೂನು- ಸುವ್ಯವಸ್ಥೆಯಲ್ಲಿ ತನ್ನಿಂದ ಏನಾದರೂ ಸಹಾಯ ಬೇಕೆಂದರೆ ಕೇಳಬಹುದು ಎಂದು ಡಾ. ಎಸ್‌ಎಂಜಿ (ಡಾ. ಸೀಮಿ ಮರಿಯನ್‌ ಜಾಜ್‌ರ್‍) ಎಂದು ಸಂಕ್ಷಿಪ್ತ ರೂಪದಲ್ಲಿ ದಾಖಲಾಗಿದ್ದ ಮೋಬೈಲ್‌ ನಂಬರ್‌ ಹೂಗಾರ್‌ ಅವರಿಗೂ ನೀಡಿದ್ದ. ಅದು ಎಸ್ಪಿಯವರದ್ದೇ ಎಂದು ನಂಬಿಕೆ ಬರುವಂತೆ ಸದರಿ ನಂಬರ್‌ಗೆ ಎಸ್ಪಿಯವರ ಫೋಟೋ ಇರುವ ಡಿಪಿ ಸಹ ಸಹ ಇಟ್ಟಿದ್ದ. ಯಾವ ಕಾರಣಕ್ಕು ಸದರಿ ನಂಬರ್‌ ಬಹಿರಂಗಪಡಿಸದಂತೆ ತಾಕೀತು ಮಾಡಿದ್ದ.

ಹೀಗೆ ಪಿಎಸ್‌ಐ ಹೂಗಾರ್‌Ü ಅವರೊಂದಿಗೆ ಸಖ್ಯ ಬೆಳೆಸಿದ್ದ ಖಾಸೀಂ ಪಟೇಲ್‌ ಪೆ. 3 ರಂದು ಸಂಜೆ 6 ಗಂಟೆಗೆ ಹೊತ್ತಿಗೆ ತನ್ನ ಮೋಬೈಲ್‌ಗೆ ಸಂದೇಶ ಬಂದಿದೆ ಎಂದು ಎಸ್ಪಿಯವರ ಫೋಟೋ ಡಿಪಿ ಇದ್ದ ಮೋಬೈಲ್‌ ನಂಬರ್‌ನಿಂದ ತುರ್ತು ಕೆಲಸಕ್ಕಾಗಿ ಹಣ ಬೇಕಾಗಿದೆ ಎಂದು ಸಂದೇಶ ಬಂದಿದೆ ಎಂದು ತಿಳಿಸುತ್ತ 2 ಲಕ್ಷ ರು ಮತ್ತು 6. 50 ಲಕ್ಷ ರು 2 ಹಂತದಲ್ಲಿ 8. 50 ಲಕ್ಷ ರು ಹಣಕ್ಕಾಗಿ ಬೇಡಿಕೆ ಇಟ್ಟು ಅವರ ಮೋಬೈಲ್‌ಗೆ ಸಂದೇಶ ರವಾನಿಸಿದಾಗ ಅದಕ್ಕೆ ಸ್ಪಂದಿಸಿದ ಪಿಎಸ್‌ಐ ಮಂಜುನಾಥ ತಕ್ಷಣ ಸ್ನೇಹಿತರ ಮೂಲಕ ಹಣವನ್ನೂ ಕಳುಹಿಸಿಕೊಟ್ಟಿದ್ದಾರೆ.

ಏತನ್ಮಧ್ಯೆ ಫೆ.3ರಂದು ಸಂಜೆ 6 ಗಂಟೆ ಹೊತ್ತಿಗೆ ಜಿಲ್ಲಾ ಎಸ್ಪಿಯವರ ರಹಸ್ಯ ಮೋಬೈಲ್‌ ನಂಬರ್‌ ಎಂದು ವಂಚಕ ನೀಡಿದ್ದ ನಂಬರ್‌ನಿಂದಲೇ ವೈಸ್‌ ಕಾಲ್‌ ಮಂಜುನಾಥ ಹೂಗಾರ್‌ ಅವರ ಮೋಬೈಲ್‌ಗೆ ಬಂದಿದೆ, ಸದರಿ ಕಾಲ್‌ ರಿಸಿವ್‌ ಮಾಡಿದಾಗ ಆಚೆಕಡೆಯಿಂದ ಮಕ್ಕಳು ಅಳುವ ಧ್ವನಿ, ಉರ್ದು ಭಾಷೆಯಲ್ಲಿ ಮಹಿಳೆಯರ ಮಾತುಕತೆ ಕೇಳಿ ಬಂದಿದೆ. ಇದರಿಂದಾಗಿ ಮೋಬೈಲ್‌ ನಂಬರ್‌ ಬಗ್ಗೆಯೇ ಮಂಜುನಾಥ ದಿಗ್ಭ್ರಮೆಗೊಂಡಿದ್ದಾರೆ.

ಫೆ.4ರ ಸಂಜೆಯೇ ಎಸ್ಪಿಯವರನ್ನು ಕಂಡು ತನಗೆ ಬಂದ ಸಂದೇಶ, ಖಾಸೀಂ ಪಟೇಲ್‌ನ ಮಾತುಕತೆ, ಹಣ ನೀಡಿದ ಸಂಗತಿ ಎಲ್ಲವನ್ನು ವಿವರಿಸಿದಾಗ ಅದನ್ನೆಲ್ಲ ನಿರಾಕರಿಸಿದ ಎಸ್ಪಿಯವರು ತಮ್ಮ ಬಳಿ ಅಂತಹ ಯಾವುದೇ ಮೋಬೈಲ್‌, ವಾಟ್ಸಪ್‌ ನಂಬರ್‌ ಇಲ್ಲವೆಂದು ಹೇಳಿದಾಗ ಶಾಕ್‌ಗೊಳಗಾದ ಪಿಎಸ್‌ಐ ಮಂಜುನಾಥ ತಕ್ಷಣ ದೂರು ದಾಖಲಿಸಿದ್ದಾರೆ. ದೂರನ್ನಾಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ವಂಚಕ ಖಾಸಂ ಪಟೇಲ್‌ ಈತನನ್ನು ಚಿಗರಳ್ಳಿ ಕ್ರಾಸ್‌ ಬಳಿ ವಶಕ್ಕೆ ಪಡೆದಿದ್ದಾರೆ. ಈತನಿಂದ ಫಾರ್ಚುನ್‌ ವಾಹನ, ವಿವಿಧ ಕಂಪನಿಗಳ ಮೋಬೈಲ್‌, 2 ಲಕ್ಷ ರು ನಗದು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸತಿಶ ಕುಮಾರ್‌ ಹೇಳಿದ್ದಾರೆ.