ಬೆಂಗಳೂರು(ನ.22):  ವೈದ್ಯಕೀಯ ಉನ್ನತ ವ್ಯಾಸಂಗಕ್ಕಾಗಿ (ಎಂಡಿ) ಸೀಟು ಕೊಡಿಸುವುದಾಗಿ ನಂಬಿಸಿ ದೆಹಲಿ ಮೂಲದ ವೈದ್ಯನಿಂದ 45 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯನ ತಂದೆ ದೆಹಲಿ ಮೂಲದ ವಿಜಯ್‌ಪಾಲ್‌ ಎಂಬುವರ ಕೊಟ್ಟ ದೂರಿನ ಮೇರೆಗೆ ಸಂಜೀವ್‌ ವ್ಯಾಸ್‌ ಎಂಬಾತನ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಿಜಯ್‌ಪಾಲ್‌ ಅವರ ಪುತ್ರ ವಿನಯ್‌ ಯಾದವ್‌ ಎಂಬಿಬಿಎಸ್‌ ಮಾಡಿದ್ದು, ಎಂಡಿ ವ್ಯಾಸಂಗ ಮಾಡಲು ನಗರದ ಕಾಲೇಜಿನಲ್ಲಿ ಸೀಟು ಪಡೆಯಲು ಯತ್ನಿಸುತ್ತಿದ್ದರು. ಎಚ್‌ಬಿಆರ್‌ ಲೇಔಟ್‌ನಲ್ಲಿ ಕಚೇರಿ ಹೊಂದಿರುವ ಸಂಜೀವ್‌ ವ್ಯಾಸ್‌, ವಿಜಯ್‌ಪಾಲ್‌ ಅವರಿಗೆ ಕರೆ ಮಾಡಿ, ನಿಮ್ಮ ಮಗನಿಗೆ ಎಂ.ಡಿ ಸೀಟು ಕೊಡಿಸುತ್ತೇನೆ. ಇದಕ್ಕೆ 45 ಲಕ್ಷ ಹಣ ಆಗುತ್ತದೆ ಎಂದಿದ್ದ. ಇದಕ್ಕೆ ಒಪ್ಪಿಕೊಂಡ ವಿಜಯ್‌ಪಾಲ್‌ 4 ಲಕ್ಷ ರು. ಮುಂಗಡ ಹಣವನ್ನು ಚೆಕ್‌ ಮೂಲಕ ಆರೋಪಿಗೆ ನೀಡಿದ್ದರು. 

ರೈತರೇ ಸಬ್ಸಿಡಿ ಸಾಲಕ್ಕೆ ಪಹಣಿ ಕೊಡುವ ಮುನ್ನ ಎಚ್ಚರ; ಹೀಗೂ ಮೋಸ ಮಾಡಬಹುದು ನೋಡಿ!

ಇದಾದ ನಂತರ ಸಂಜೀವ್‌, ವಿಜಯ್‌ಪಾಲ್‌ ಅವರಿಗೆ ಕರೆ ಮಾಡಿ, ನಿಮ್ಮ ಪುತ್ರನಿಗೆ ಜವಾಹರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೋಸ್ಟ್‌ ಗ್ರಾಜ್ಯೂಯೇಟ್‌ ಮೆಡಿಕಲ್‌ ಎಜುಕೇಷನ್‌ ಅಂಡ್‌ ರಿಸರ್ಚ್‌ ಕಾಲೇಜಿನಲ್ಲಿ ಸೀಟು ಸಿಕ್ಕಿದೆ ಎಂದಿದ್ದ. ಅಲ್ಲದೆ, ಕಾಲೇಜಿನ ವೆಬ್‌ಸೈಟ್‌ನಲ್ಲಿ ಬೇರೊಬ್ಬರ ಹೆಸರು ತೋರಿಸಿ ನಿಮ್ಮದೆ ಪುತ್ರನ ಹೆಸರು ಎಂದು ನಂಬಿಸಿದ್ದ. ಇದನ್ನು ನಂಬಿದ ದೂರುದಾರರು ಆರೋಪಿಗೆ ಉಳಿಕೆ 41 ಲಕ್ಷ ಹಣ ನೀಡಿದ್ದರು. ಹಣ ಪಡೆದ ಬಳಿಕ ಆರೋಪಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆ ಆಗಿದ್ದಾನೆ. ಈ ಸಂಬಂಧ ವಿಜಯ್‌ಪಾಲ್‌ ದೂರು ನೀಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.