ಬೆಂಗಳೂರು(ಸೆ.14): ವೈದ್ಯಕೀಯ ಸೋಗಿನಲ್ಲಿ ಬಂದ ಯುವಕನ ಮಾತಿಗೆ ಮರುಳಾದ ಉದ್ಯಮಿಯೊಬ್ಬರು ಮೈಮೇಲಿದ್ದ ಚಿನ್ನಾಭರಣವನ್ನೆಲ್ಲ ಬಿಚ್ಚಿಕೊಟ್ಟು ಮಕ್ಮಲ್‌ ಟೋಪಿ ಹಾಕಿಸಿಕೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಅರಸೀಕೆರೆಯ ಗಂಜಿಗೆರೆ ನಿವಾಸಿಯಾಗಿರುವ ಉದ್ಯಮಿ ಜಿ.ಕೆ.ನಂಜೇಶ್‌ ವಂಚನೆಗೆ ಒಳಗಾದವರು. ಉದ್ಯಮಿ ಕೊಟ್ಟ ದೂರಿನ ಮೇರೆಗೆ ಸುರೇಶ್‌ ಎಂಬುವನ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಬ್ಬಂದಿ ನಡುವೆ ವಾಗ್ವಾದ, ಕೈಬೆರಳು ಕಚ್ಚಿ ತುಂಡರಿಸಿದ ಭೂಪ!

ನಂಜೇಶ್‌ ಚಿಕ್ಕಮಗಳೂರಿನಲ್ಲಿ ರಸಗೊಬ್ಬರ ವ್ಯಾಪಾರಿ. ನಗರಕ್ಕೆ ಬಂದಿದ್ದ ಅವರು, ಸೆ.1ರಂದು ಮಧ್ಯಾಹ್ನ 2 ಸುಮಾರಿಗೆ ಊಟಕ್ಕೆಂದು ಆನಂದ್‌ ರಾವ್‌ ಸರ್ಕಲ್‌ ಬಳಿ ಇರುವ ಹೋಟೆಲ್‌ಗೆ ಹೋಗಿದ್ದರು. ಅಪರಿಚಿತ ಯುವಕನೊಬ್ಬ ತಾನು ಬೌರಿಂಗ್‌ ಆಸ್ಪತ್ರೆಯ ವೈದ್ಯ ಸುರೇಶ್‌ ಎಂದು ಪರಿಚಯಿಸಿಕೊಂಡಿದ್ದ. ಇದಾದ ಸ್ವಲ್ಪ ಹೊತ್ತಿನ ಬಳಿಕ ಆಪರೇಷನ್‌ ಥಿಯೇಟರ್‌ ತೋರಿಸುವುದಾಗಿ ಹೇಳಿ, ಉದ್ಯಮಿಯನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದಿದ್ದ. ಅಪರೇಷನ್‌ ಥಿಯೇಟರ್‌ ಒಳ ಹೋಗಲು ಮೈಮೇಲೆ ಚಿನ್ನಾಭರಣ ಹಾಗೂ ಇತರೆ ವಸ್ತುಗಳಿರಬಾರದು ಎಂದು ಹೇಳಿದ್ದ. ಆತನ ಮಾತನ್ನು ನಂಬಿದ ಉದ್ಯಮಿ, 35 ಗ್ರಾಂ ಚಿನ್ನದ ಸರ, 16 ಗ್ರಾಂ. ಉಂಗುರ, 1.20 ಲಕ್ಷ ನಗದು ಹಾಗೂ ಇತರೆ ದಾಖಲಾತಿಗಳನ್ನು ತಾವು ಉಳಿದುಕೊಂಡಿದ್ದ ಕೊಠಡಿಯಲ್ಲಿನ ಲಾಕರ್‌ನಲ್ಲಿಟ್ಟಿದ್ದರು.

ಹೋಟೆಲ್‌ ಕೊಠಡಿಯ ಕೀಯನ್ನು ವಂಚಕ ತೆಗೆದುಕೊಂಡಿದ್ದ. ಬೌರಿಂಗ್‌ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ ಮುಂದೆ ಕೂರಿಸಿದ್ದ. 7 ಗಂಟೆಯಾದರೂ ಯಾರೊಬ್ಬರು ಕರೆದಿಲ್ಲ. ಹೀಗಾಗಿ, ಸುರೇಶ್‌ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ, ಆ ಹೆಸರಿನ ವೈದ್ಯರು ಇಲ್ಲ ಎಂಬುದು ಗೊತ್ತಾಗಿದೆ. ಹೋಟೆಲ್‌ಗೆ ಬಂದು ಕೊಠಡಿಯಲ್ಲಿ ನೋಡಿದಾಗ, ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ತೆಗೆದುಕೊಂಡು ಪರಾರಿಯಾಗಿದ್ದ.