ಬೆಂಗಳೂರು(ಫೆ.17): ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ಅಂಗಡಿ ಮಾಲೀಕರಿಗೆ ವಂಚಿಸಿ 4.58 ಕೋಟಿ ಮೌಲ್ಯದ ಬಂಗಾರದ ಗಟ್ಟಿಗಳನ್ನು ಕಳವು ಮಾಡಿದ್ದ ಕೆಲಸಗಾರನೊಬ್ಬನನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸ್ವಪ್ನಿಲ್‌ ಘಾಡ್ಗೆ ಬಂಧಿತನಾಗಿದ್ದು, ಆರೋಪಿಯಿಂದ 4.58 ಮೌಲ್ಯದ 11.2 ಕೆ.ಜಿ. ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರ್ತ ಪೇಟೆಯ ಚಿನ್ನದ ವ್ಯಾಪಾರಿ ಸಿದ್ದೇಶ್ವರ್‌ ಸಿಂಧೆ ಅವರಿಗೆ ವಂಚಿಸಿ ಆರೋಪಿ ಚಿನ್ನ ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೇಗೆ ವಂಚನೆ?:

ಹಲವು ವರ್ಷಗಳಿಂದ ನಗರ್ತ ಪೇಟೆಯ ಕೆಂಪಣ್ಣ ಲೇನ್‌ನಲ್ಲಿ ಆಭರಣ ವ್ಯಾಪಾರಿಗಳಿಂದ ಹಳೆ ಚಿನ್ನಾಭರಣಗಳನ್ನು ಪಡೆದು ಕರಗಿಸಿ ಬಂಗಾರ ತಯಾರಿಸುವ ‘ಸಂಸ್ಕಾರ್‌ ರಿಫೈನರಿ ಎಂಟರ್‌ಪ್ರೈಸಸ್‌’ ಎಂಬ ಅಂಗಡಿಯನ್ನು ಸಿದ್ದೇಶ್ವರ್‌ ಶಿಂಧೆ ಹೊಂದಿದ್ದಾರೆ. ಅಂತೆಯೇ ಜ.9ರಂದು ಸುಮಾರು 12.7 ಕೆ.ಜಿ. ತೂಕದ ಚಿನ್ನವನ್ನು ಕರಗಿಸಿದ್ದರು. ನಂತರ ಅದೇ ದಿನ ರಾತ್ರಿ ಆರ್‌.ಟಿ.ಸ್ಟ್ರೀಟ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಗಾರರೊಂದಿಗೆ ತೆರಳಿ ಬಂಗಾರದ ಗಟ್ಟಿಗಳನ್ನಿಟ್ಟು ಬಂದಿದ್ದರು.

ನಕಲಿ ದಾಖಲೆ ಸಲ್ಲಿಸಿ ಬ್ಯಾಂಕಿಂದ 9 ಲಕ್ಷ ಸಾಲ ಪಡೆದು ವಂಚನೆ

ಮರುದಿನ ಸ್ವಪ್ನಿಲ್‌, ಚಿನ್ನದ ಗಟ್ಟಿಗಳನ್ನು ಇಟ್ಟಿದ್ದ ಮನೆಗೆ ತೆರಳಿ ‘ಮಾಲೀಕರು ಬಂದಿದ್ದಾರೆ’ ಎಂದು ಸುಳ್ಳು ಹೇಳಿ ಗಟ್ಟಿಗಳನ್ನು ಪಡೆದಿದ್ದ. ಅಲ್ಲಿಂದ ನಗರ್ತ ಪೇಟೆಯ ಅಂಗಡಿಗೆ ಬಂದಿದ್ದ ಆರೋಪಿ, ಚಿನ್ನದ ಗಟ್ಟಿಗಳ ಸಮೇತ ಪರಾರಿಯಾಗಿದ್ದ. ಸಂಬಂಧಿಕರ ಮೂಲಕ ಸಿಂಧೆ ಅವರಿಗೆ ವಿಷಯ ತಿಳಿಯಿತು. ಕೂಡಲೇ ಈ ಬಗ್ಗೆ ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಮಹಾರಾಷ್ಟ್ರದ ಸೊಲ್ಲಾಪುರದ ಜಿಲ್ಲೆಯಲ್ಲಿರುವ ಸ್ವಗ್ರಾಮ ಶಿವಾನಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ.

3 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಸ್ವಪ್ನಿಲ್‌

ಆರೋಪಿ ಪಿಯುಸಿ ವರೆಗೆ ವ್ಯಾಸಂಗ ಮಾಡಿದ್ದು, ಮೊದಲು ಹೈದರಾಬಾದ್‌ನಲ್ಲಿ ಚಿನ್ನ ಕರಗಿಸುವ ಕೆಲಸ ಮಾಡುತ್ತಿದ್ದ. ಕೊರೋನಾ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ತನ್ನೂರಿಗೆ ಮರಳಿದ ಆತ, ಮೂರು ತಿಂಗಳ ಹಿಂದೆ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ. ತರುವಾಯ ತನ್ನ ಗೆಳೆಯ ದಿಗಂಬರನ ಪರಿಚಯದ ಮೇರೆಗೆ ಸಿಂಧೆ ಅವರ ಅಂಗಡಿಯಲ್ಲಿ ಆತನಿಗೆ ಕೆಲಸ ಸಿಕ್ಕಿತು. ದಿಢೀರ್‌ ಶ್ರೀಮಂತನಾಗುವ ದುರಾಸೆಯಿಂದ ಚಿನ್ನ ಗಟ್ಟಿಕದ್ದು ಈಗ ಸ್ವಪ್ನಿಲ್‌ ಜೈಲು ಸೇರುವಂತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.