ಬೆಂಗಳೂರು(ಫೆ.15): ನಕಲಿ ದಾಖಲೆ ಸಲ್ಲಿಸಿ ಆರೋಪಿಗಳಿಬ್ಬರು ಬ್ಯಾಂಕ್‌ನಿಂದ .9 ಲಕ್ಷ ಸಾಲ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಸುಂಕದಕಟ್ಟೆ ಶಾಖೆಯ ಓವರ್‌ಸೀಸ್‌ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ವಿಜಯ್‌ಕುಮಾರ್‌ ಎಂಬುವರು ನೀಡಿದ ದೂರಿನ ಮೇರೆಗೆ ಬಿ.ವೆಂಕಟೇಶ್‌ ಮೂರ್ತಿ, ಕೆ.ಪಿ.ಮಂಜುಳಾ ಎಂಬುವರ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆರೋಪಿಗಳು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಸುಂಕದಕಟ್ಟೆ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. 2020 ಡಿ.1ರಂದು ಹೋಂಡಾ ಕಂಪನಿಯ ಕಾರು ಖರೀದಿಸಲು 6.50 ಲಕ್ಷ ಸಾಲ ಕೋರಿ ಹೋಂಡಾ ಕಂಪನಿಯ ಕೊಟೇಶನ್‌ನೊಂದಿಗೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಬ್ಯಾಂಕ್‌ನಿಂದ ಸಾಲ ಮಂಜೂರಾಗಿತ್ತು. ಕಾರು ಖರೀದಿಸಿದ ಇನ್ವಾಯಿಸ್‌ ಪ್ರತಿಯನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಮತ್ತೆ ಇದೇ ವಾಹನಕ್ಕೆ 3 ಲಕ್ಷ ಸಾಲ ಪಡೆದಿದ್ದರು. 2020 ಜ.7ರಿಂದ 24ರ ವರೆಗೆ ಸಾಲ ಪಡೆದ ಹಣವನ್ನು ಆನ್‌ಲೈನ್‌ ಮೂಲಕ ಯಶವಂತಪುರ ಶಾಖೆಯ ಆಂಧ್ರ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದರು.

ಮದ್ವೆ ಭರವಸೆ : ಪ್ರಸಿದ್ಧ ಮಠದ ಸ್ವಾಮೀಜಿ ಸಹೋದರ ಉಪನ್ಯಾಸಕಿ ಬಳಿ ಕಾಮದಾಹ ತೀರಿಸ್ಕೊಂಡು ವಂಚನೆ

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಸಿಬ್ಬಂದಿಗೆ ಅನುಮಾನ ಬಂದು ಆರೋಪಿಗಳು ಸಾಲ ಪಡೆಯಲು ಬ್ಯಾಂಕ್‌ಗೆ ಸಲ್ಲಿಸಿದ್ದ ಕೊಟೇಶನ್‌ ಪ್ರತಿ, ಇನ್ವಾಸ್‌ ಪ್ರತಿ, ಆರ್‌.ಸಿ ಪ್ರತಿ ಸೇರಿ ಇತರ ದಾಖಲೆಗಳನ್ನು ನೈಜತೆಗಾಗಿ ಹೋಂಡಾ ಕಂಪನಿಗೆ ಹೋಗಿ ವಿಚಾರಿಸಿದಾಗ ಕಂಪನಿಯಿಂದ ಆರೋಪಿಗಳು ಕಾರು ಖರೀದಿಸಿಯೇ ಇಲ್ಲ ಎಂಬ ಸಂಗತಿ ಗೊತ್ತಾಗಿದೆ. ಆರೋಪಿಗಳು ಹೋಂಡಾ ಕಂಪನಿಯ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದು ಆ ಹಣವನ್ನು ಬೇರೆ ವ್ಯವಹಾರಕ್ಕೆ ವಿನಿಯೋಗಿಸಿರುವ ವಿಚಾರ ಗೊತ್ತಾಗುತ್ತಿದ್ದಂತೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.