ಬೆಳಗಾವಿ(ಜ.15): ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದಕ್ಕೆ ಲಾರಿ ಕ್ಲೀನರ್‌ವೊಬ್ಬನನ್ನ ಮೂವರ ತಂಡ ಕೊಲೆ ಮಾಡಿದ ಘಟನೆ ನಗರದ ಬೆಳಗಾವಿ ನಾಕಾ ಬಳಿ ಮಂಗಳವಾರ ರಾತ್ರಿ ನಡೆದಿದೆ. ಕೊಲೆಯಾದವರನ್ನ ಚಿತ್ರದುರ್ಗ ಮೂಲದ ಮಹಮ್ಮದ್ ಶಫೀವುಲ್ಲಾ ಎಂದು ಗುರುತಿಸಲಾಗಿದೆ.  

ಮೂವರ ತಂಡದಲ್ಲಿ ಒಬ್ಬನ ಹೆಸರು ರಾಜು ಲೋಕರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಬೆಂಕಿಪೊಟ್ಟಣದ ವಿಚಾರಕ್ಕೆ ರಾಜು ಲೋಕರೆ ಹಾಗೂ ಮೃತ ಮಹಮ್ಮದ್ ಶಫೀವುಲ್ಲಾ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಬೆಳೆದು ಜಗಳ ತಾರಕಕ್ಕೇರಿದ್ದರಿಂದ ಮೂವರು ಸೇರಿ ಮಹಮ್ಮದ್ ಶಫೀವುಲ್ಲಾನ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಮಣ್ಣಲ್ಲಿ ತಲೆಯನ್ನು ಹೂತು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಲೆ ಮಾಡಿ ಕುಡಿದ ಮತ್ತು ಇಳಿಯುವವರೆಗೂ ಮೂವರು ಆರೋಪಿಗಳು ಹೆಣದ ಜತೆಗಿದ್ದರು. ಮತ್ತು ಇಳಿದ ಬಳಿಕ ಆರೋಪಿ ರಾಜು ಲೋಕರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಶಹಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.