ಬೆಂಗಳೂರು, (ಏ.10): ಹೈದರಾಬಾದ್‌ನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವನ ಬಳಿ ಬರೋಬ್ಬರಿ 3.25 ಕೋಟಿ ರೂ ಪತ್ತೆಯಾಗಿದೆ. ಈ ಹಣವನ್ನು ಆಂಧ್ರಪ್ರದೇಶದ ಕರ್ನೂಲ್ ವಿಶೇಷ ಜಾರಿ ವಿಭಾಗ (ಎಸ್‌ಇಬಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಬೆಂಗಳೂರು ಮೂಲದ ಖಾಸಗಿ ಟ್ರಾವೆಲ್ಸ್ ಕಂಪನಿ ಚಾಲಕ ಬಿ.ಎ. ಚೇತನ್‌ಕುಮಾರ್ ಹಣ ಸಾಗಿಸುತ್ತಿದ್ದ ವ್ಯಕ್ತಿ. ಚೆನ್ನೈ ಮೂಲದ ಅರುಣ್ ಎಂಬಾತನಿಗೆ ಸೇರಿದ ಹಣವನ್ನು ಚೇತನ್ ಸಾಗಿಸುತ್ತಿದ್ದ ಎಂದು ಕರ್ನೂಲ್ ಎಸ್‌ಪಿ ಡಾ.ಕೆ. ಫಕೀರಪ್ಪ ತಿಳಿಸಿದ್ದಾರೆ. 

ಮ್ಯಾಟ್ರಿಮೋನಿ ಪರಿಚಯ, ನಂಬಿಸಿ ಬೆಂಗ್ಳೂರು ಟೆಕ್ಕಿ ಯುವತಿಗೆ 10 ಲಕ್ಷ ದೋಖಾ!

ಅರುಣ್, ಚೇತನ್‌ನನ್ನು ಮಾ. 28ರಂದು ವಿಮಾನದಲ್ಲಿ ರಾಯಪುರಕ್ಕೆ ಕಳುಹಿಸಿದ್ದ. ಅಲ್ಲಿಂದ ಚೇತನ್, ರಾಯ್‌ಗಢಕ್ಕೆ ತೆರಳಿ ತ್ರೀ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ. ಹೋಟೆಲ್‌ಗೆ ಬಂದ ಕೆಲವು ವ್ಯಕ್ತಿಗಳು ಚೇತನ್‌ನನ್ನು ಸಂಪರ್ಕಿಸಿ ಹಣ ನೀಡಿದ್ದರು.

ಏ. 8ರಂದು ಚೇತನ್ ಹಣದೊಂದಿಗೆ ಬಿಲಾಸ್ಪುರಕ್ಕೆ ಬಂದು ಅಲ್ಲಿಂದ ಖಾಸಗಿ ಬಸ್‌ನಲ್ಲಿ ಹೈದರಾಬಾದ್ ತಲುಪಿದ್ದ. ಶುಕ್ರವಾರ ತಡರಾತ್ರಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದ. ದರೋಡೆ ಪ್ರಕರಣದ ತನಿಖೆ ಕೈಗೊಂಡಿದ್ದ ಎಸ್‌ಇಬಿ ಅಧಿಕಾರಿಗಳು ಪಂಚಲಿಂಗಲ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. 

ಆಗ ಖಾಸಗಿ ಬಸ್ ತಪಾಸಣೆ ನಡೆಸಿದಾಗ 3.25 ಕೋಟಿ ರೂ. ಪತ್ತೆಯಾಗಿದೆ. ದೊಡ್ಡ ಮೊತ್ತಕ್ಕೆ ಸೂಕ್ತ ದಾಖಲೆ ನೀಡದ ಕಾರಣ ಹಣ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.