Asianet Suvarna News Asianet Suvarna News

ಮಾನಹಾನಿಕರ ಲೇಖನ, ‘ಪಾರಿವಾಳ’ ಸಂಪಾದಕನಿಗೆ 6 ತಿಂಗಳು ಜೈಲು

ಮಾನಹಾನಿ ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯದ 6 ತಿಂಗಳ ಶಿಕ್ಷೆಯ ತೀರ್ಪನ್ನು ಹೈಕೋರ್ಚ್‌ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ‘ಪಾರಿವಾಳ’ ಪಾಕ್ಷಿಕ ಪತ್ರಿಕೆ ಸಂಪಾದಕ ರವಿಕುಮಾರ್‌ನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

parivala magazine editor Ravi Kumar  sentenced 6 months gow
Author
Bengaluru, First Published Aug 27, 2022, 7:26 AM IST

 ಬೆಂಗಳೂರು (ಆ.27): ಮಾನಹಾನಿ ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯದ 6 ತಿಂಗಳ ಶಿಕ್ಷೆಯ ತೀರ್ಪನ್ನು ಹೈಕೋರ್ಚ್‌ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ‘ಪಾರಿವಾಳ’ ಪಾಕ್ಷಿಕ ಪತ್ರಿಕೆ ಸಂಪಾದಕ ರವಿಕುಮಾರ್‌ನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎ.ಹರೀಶ್‌ಗೌಡ ಅವರು 2000ನೇ ಸಾಲಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದಾಗ ಪಾರಿವಾಳ ಪತ್ರಿಕೆಯಲ್ಲಿ ಅವರ ಬಗ್ಗೆ ಮಾನಹಾನಿ ಲೇಖನ ಪ್ರಕಟಿಸಲಾಗಿತ್ತು. ಈ ಸಂಬಂಧ ಹರೀಶ್‌ಗೌಡ ಅವರು ನ್ಯಾಯಾಲಯದಲ್ಲಿ ರವಿಕುಮಾರ್‌ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. 2002ರಲ್ಲಿ ವಿಚಾರಣಾ (ಟ್ರಯಲ್‌) ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಿ ಆರೋಪಿ ರವಿಕುಮಾರ್‌ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತ್ತು. 2004ರಲ್ಲಿ ಜಿಲ್ಲಾ ಮತ್ತು ಸತ್ರನ್ಯಾಯಾಲಯವು ವಿಚಾರಣಾ ಕೋರ್ಚ್‌ನ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ 2013ರಲ್ಲಿ ಹೈಕೋರ್ಚ್‌ ಈ ಪ್ರಕರಣವನ್ನು ರದ್ದುಗೊಳಿಸಿ ಮತ್ತೊಮ್ಮೆ ಪ್ರಕರಣವನ್ನು ಪಾಟೀಸವಾಲಿಗೆ ಒಳಪಡಿಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿತ್ತು.

ಅದರಂತೆ 2017ರಲ್ಲಿ ವಿಚಾರಣಾ ನ್ಯಾಯಾಲಯವು ಹೊರಡಿಸಿದ ಹೊಸ ತೀರ್ಪಿನಲ್ಲಿ ರವಿಕುಮಾರ್‌ಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಈ ವೇಳೆ ದೂರುದಾರ ಹರೀಶ್‌ ಗೌಡ ಅವರು ಆರೋಪಿಗೆ ಜೈಲು ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಆರೋಪಿಗೆ ಜೈಲು ಶಿಕ್ಷೆಯನ್ನು 9 ತಿಂಗಳಿಗೆ ವಿಸ್ತರಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪಿನ್ನು ಆರೋಪಿ ರವಿಕುಮಾರ್‌ ಹೈಕೋರ್ಚ್‌ನಲ್ಲಿ ಪ್ರಶ್ನಿಸಿದ್ದರು.

ಇದೀಗ ಈ ಮೇಲ್ಮನವಿಯ ವಿಚಾರಣೆ ಮಾಡಿದ ಹೈಕೋರ್ಚ್‌, ‘ಇದೊಂದು ಖಾಸಗಿ ದೂರು ಆಗಿರುವುದರಿಂದ ಜೈಲು ಶಿಕ್ಷೆಯನ್ನು ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟು, 6 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಅದರಂತೆ ಉಪ್ಪಾರಪೇಟೆ ಠಾಣೆ ಪೊಲೀಸರು ರವಿಕುಮಾರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಹಲ್ಲೆ ಪ್ರಕರಣ: ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು
ಉಡುಪಿ: ಮಹಿಳೆಯೊಬ್ಬರ ಮಾನಹಾನಿಗೈದು ಕೊಡಲಿಯಿಂದ ಹಲ್ಲೆಗೈದ ಪ್ರಕರಣದ ಆರೋಪಿಯೋರ್ವನಿಗೆ ಕಾರ್ಕಳ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2021 ನ. 23ರಂದು ಸಾಣೂರು ಗ್ರಾಮದ ಇಂದಿರಾ ನಗರದ ದರ್ಖಾಸು ಮನೆಯಲ್ಲಿ ಈ ಘಟನೆ ನಡೆದಿತ್ತು. ತನ್ನ ಮನೆಯ ಜಗುಲಿಯಲ್ಲಿ ಸಂಪಾ ಕುಳಿತಿದ್ದ ಸಂದರ್ಭದಲ್ಲಿ ಆರೋಪಿ ಉಮೇಶ ಎಂಬಾತ ಪೊರಕೆ ಹಿಡಿದು ಸಂಪಾ ಅವರ ಹಿತ್ತಲಿಗೆ ಅಕ್ರಮವಾಗಿ ಪ್ರವೇಶಗೈದಿದ್ದ. ಹಿತ್ತಲಿನಲ್ಲಿದ್ದ ಸಾಗುವಾನಿ ಮರವನ್ನು ಕಡಿಯಬೇಕೆಂದು ಆರೋಪಿ ಉಮೇಶ್‌ ಪಟ್ಟು ಹಿಡಿದಾಗ ಸಂಪಾ ಆಕ್ಷೇಪ ವ್ಯಕ್ತಪಡಿಸಿದ್ದರು. 

ಆ ಸಂದರ್ಭ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪಿ ತನ್ನ ಮನೆಗೆ ಹಿಂತಿರುಗಿ ಕೊಡಲಿಯನ್ನು ಹಿಡಿದುಕೊಂಡು ಬಂದು ಸಂಪಾ ಅವರಿಗೆ ಹೊಡೆಯಲು ಹೋಗಿದ್ದನು. ಘಟನೆಯ ತೀವ್ರತೆಯನ್ನು ಅರಿತುಕೊಂಡು ತಪ್ಪಿಸಿಕೊಂಡಾಗ ಕೊಡಲಿಯು ಸಂಪಾ ಅವರ ಬಲಕಿವಿ ಮತ್ತು ಬಲಭುಜಕ್ಕೆ ತಾಗಿ ಸಾದಾ ಸ್ವರೂಪದಲ್ಲಿ ಗಾಯಗಳಾಗಿದ್ದವು. ಆ ವೇಳೆಗೆ ಸಂಪಾ ಅವರನ್ನು ಉದ್ದೇಶಿಸಿ ನಿಮ್ಮನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ತನ್ನಲ್ಲಿದ್ದ ಕೊಡಲಿಯನ್ನು ಎಸೆದು ಪರಾರಿಯಾಗಿದ್ದನು. 

ಈ ಬಗ್ಗೆ ಅಂದು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮುಖ್ಯ ಪೇದೆಗಳಾದ ಸದಾಶಿವ ಶೆಟ್ಟಿಹಾಗೂ ಮೂರ್ತಿ ಕೆ. ಇವರು ಆರಂಭಿಕ ತನಿಖೆ ಪೂರೈಸಿ, ಮುಂದಿನ ತನಿಖೆಯನ್ನು ಪಿಎಸ್‌ಐ ದಾಮೋದರ ಕೆ.ಬಿ. ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಚೇತನಾ ಎಸ್‌.ಎಫ್‌. ಅವರು ಪ್ರಕರಣದ ವಾದ-ಪ್ರತಿವಾದ ಆಲಿಸಿ ಆರೋಪಿ ಉಮೇಶ್‌ ಅಪರಾಧಿ ಎಂದು ಘೋಷಿಸಿದ್ದಾರೆ. 1.6 ವರ್ಷ ಸಾದಾ ಕಾರಗೃಹ ವಾಸ, 3 ಸಾವಿರ ರು. ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಅವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.

Follow Us:
Download App:
  • android
  • ios