ಭಾರತೀ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬಂಧನ ಭೀತಿಗೊಳಗಾಗಿರುವ ಮಾಜಿ ಸಚಿವ, ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಮಧ್ಯಂತರ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ನಿರಾಕರಿಸಿದೆ.

ಬೆಂಗಳೂರು : ಭಾರತೀ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬಂಧನ ಭೀತಿಗೊಳಗಾಗಿರುವ ಮಾಜಿ ಸಚಿವ, ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಮಧ್ಯಂತರ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ನಿರಾಕರಿಸಿದೆ. ಹೀಗಾಗಿ ಅವರಿಗೆ ಬಂಧನದ ಭೀತಿ ಮತ್ತಷ್ಟು ಹೆಚ್ಚಿಸಿದೆ.

ಈ ನಡುವೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಶಾಸಕ ಬಸವರಾಜು ನಾಪತ್ತೆಯಾಗಿದ್ದಾರೆ. ಶಾಸಕರ ಪತ್ತೆಗೆ ಶುಕ್ರವಾರ ಸಂಜೆಯಿಂದ ಕಾರ್ಯಾಚರಣೆಗಿಳಿದಿರುವ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಅಧಿಕಾರಿಗಳು, ಬೆಂಗಳೂರು, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಮತ್ತೆ ಶಾಕ್‌:

ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮತ್ತೆ ಜಾಮೀನು ಕೋರಿ ಶಾಸಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಕೆಗೆ ಸಿಐಡಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಈ ವೇಳೆ ಎರಡು ದಿನಗಳ ಮಟ್ಟಿಗೆ ಮಧ್ಯಂತರ ಜಾಮೀನು ನೀಡುವಂತೆ ಶಾಸಕರ ಪರ ಹಿರಿಯ ವಕೀಲ ಸಂದೀಪ್ ಚೌಟ ಮನವಿ ಮಾಡಿದರು. ಆದರೆ ಈ ಕೋರಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿತು.

ದುರುದ್ದೇಶಪೂರ್ವಕ ಉಲ್ಲೇಖ:ಬಿಕ್ಲು ಶಿವ ಹತ್ಯೆ ಸಂಬಂಧ ಮೃತನ ತಾಯಿ ನೀಡಿದ ದೂರಿನಲ್ಲಿ ಬಸವರಾಜು ಹೆಸರಿಲ್ಲ. ತಾವು ಯಾರ ಹೆಸರನ್ನು ಹೇಳಿಲ್ಲ ಎಂದು ಮಾಧ್ಯಮಗಳಿಗೆ ಮೃತನ ತಾಯಿ ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ ಎಫ್‌ಐಆರ್‌ ನಲ್ಲಿ ಶಾಸಕರ ಹೆಸರು ಉಲ್ಲೇಖಿಸಲಾಗಿದೆ. ಇದು ದುರುದ್ದೇಶಪೂರ್ವಕ ಎಂದು ಸಂದೀಪ್ ವಾದಿಸಿದರು.

ನಾಲ್ಕು ಬಾರಿ ಬೈರತಿ ಬಸವರಾಜು ಅ‍ವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹತ್ಯೆ ಪ್ರಕರಣದಲ್ಲಿ ಮೊದಲು ತನಿಖೆ ನಡೆಸಿದ್ದ ಪೂರ್ವ ವಿಭಾಗದ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ರದ್ದುಪಡಿಸಿ ಸೆಷನ್‌ ನ್ಯಾಯಾಲಯದಲ್ಲಿ ಜಾಮೀನು ಸಲ್ಲಿಕೆಗೆ ಹೈಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಶಾಸಕರಿಗೆ ಎರಡು ದಿನಗಳು ಬಲವಂತದ ಕ್ರಮದಿಂದ ರಕ್ಷಣೆ ನೀಡುವಂತೆ ಸಂದೀಪ್ ಚೌಟ ಮನವಿ ಮಾಡಿದರು.ಇದಕ್ಕೆ ಸಿಐಡಿ ಪರ ಹಿರಿಯ ವಕೀಲ ಅಶೋಕ್ ನಾಯ್ಕ್ ಆಕ್ಷೇಪಿಸಿದರು. ಸೆಷನ್ಸ್ ಕೋರ್ಟ್‌ಗೆ ಶಾರ್ಟ್ ಟೈಂ ರಿಲೀಫ್ ನೀಡಲು ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಕೊನೆಗೆ ವಿಚಾರಣೆಯನ್ನು ಮುಂದೂಡಿತು.

ಶೋಧ:

ನಾಪತ್ತೆಯಾಗಿರುವ ಬೈರತಿ ಎಲ್ಲಿದ್ದಾರೆಂಬುದು ಸಿಐಡಿಗೆ ಸ್ಪಷ್ಟವಾಗಿಲ್ಲ. ಹೀಗಾಗಿ ಶಾಸಕರ ಕುಟುಂಬದವರು ಹಾಗೂ ಆಪ್ತರ ಸ್ನೇಹಿತರ ಮೂಲಕ ಶಾಸಕರಿಗೆ ಗಾಳ ಹಾಕಲು ಯತ್ನಿಸಿದೆ. ಆದರೆ ತಮಗೂ ಬೈರತಿ ಬಸವರಾಜು ಅವರ ಬಗ್ಗೆ ಮಾಹಿತಿ ಇಲ್ಲ ಎಂದು ಸಿಐಡಿಗೆ ಶಾಸಕರ ಆಪ್ತರು ಹೇಳಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರದವರೆಗೆ ಪಾಲ್ಗೊಂಡಿದ್ದ ಬೈರತಿ ಅವರು ತರುವಾಯ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಕಣ್ಮರೆಯಾಗಿದ್ದಾರೆ. ಹೈಕೋರ್ಟ್‌ನಲ್ಲಿ ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ನಡೆಯುವ ಮಾಹಿತಿ ಪಡೆದು ನಾಪತ್ತೆಯಾಗಿದ್ದರು. ಒಂದು ವೇಳೆ ಜಾಮೀನು ಪಡೆದಿದ್ದರೆ ಮರು ದಿನವೇ ಸಿಐಡಿ ಮುಂದೆ ಹಾಜರಾಗಲು ಶಾಸಕರು ನಿರ್ಧರಿಸಿದ್ದರು.