*  ಚಿಕ್ಕ ಪ್ಲಾಸ್ಟಿಕ್‌ ಕವರ್‌ನಲ್ಲಿ ಎಂಡಿಎಂಎ ಪುಡಿ ಮಾರಾಟ*  ಬಿಜಿನೆಸ್‌ ವೀಸಾದಲ್ಲಿ ಬಂದು ಡ್ರಗ್‌ ಸಬ್‌ ಡೀಲರ್‌ ಆದ*  ಸಿಸಿಬಿ ದಾಳಿ ವೇಳೆ 20 ಲಕ್ಷದ ಡ್ರಗ್‌ ಪತ್ತೆ 

ಬೆಂಗಳೂರು(ಅ.28): ವ್ಯಾಪಾರ ವೀಸಾದಡಿ(Visa) ನಗರಕ್ಕೆ(Bengaluru) ಬಂದು ಮಾದಕವಸ್ತು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದ ನೈಜೀರಿಯಾ ಮೂಲದ ಡ್ರಗ್‌ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಬಂಧಿಸಿದ್ದಾರೆ.

ಒಎಂಬಿಆರ್‌ ಲೇಔಟ್‌ ನಿವಾಸಿ ಜೋ(45) ಬಂಧಿತ. ರಾಮಮೂರ್ತಿನಗರ ಪೊಲೀಸ್‌(Police) ಠಾಣೆ ವ್ಯಾಪ್ತಿಯಲ್ಲಿ ಡ್ರಗ್‌ ಪೆಡ್ಲಿಂಗ್‌(Drug Pedling) ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಮನೆಯ ಮೇಲೆ ದಾಳಿ(Raid) ಆತನನ್ನು ಬಂಧಿಸಲಾಗಿದೆ. ಈ ವೇಳೆ ಸುಮಾರು .20 ಲಕ್ಷ ಮೌಲ್ಯದ 100 ಎಂಡಿಎಂಎ ಕ್ರಿಸ್ಟೆಲ್‌, 200 ಎಂಡಿಎಂಎ ಎಕ್ಸ್‌ಟೆಸಿ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು(CCB Police) ತಿಳಿಸಿದ್ದಾರೆ.

ಡ್ರಗ್ಸ್ ಸೇವನೆ ಹೇಗೆ ಮೆದುಳು ಮತ್ತು ನರವ್ಯೂಹ ಕೊಲ್ಲುತ್ತದೆ?

ಆರೋಪಿ(Accused) ಜೋ 2019ರಲ್ಲಿ ಬಿಜಿನೆಸ್‌ ವೀಸಾದಡಿ(Business Visa) ನಗರಕ್ಕೆ ಬಂದಿದ್ದು, ಡ್ರಗ್‌ ಪೆಡ್ಲಿಂಗ್‌ಗೆ ಇಳಿದಿದ್ದ. ಗೋವಾದಲ್ಲಿ(Goa) ನೆಲೆಸಿರುವ ಈತನ ಸಹಚರ ಡ್ರಗ್‌(Drugs) ಪೆಡ್ಲರ್‌, ಪೋಲ್ಯಾಂಡ್‌ನಿಂದ ಅಂಚೆ ಮೂಲಕ ಮಾದಕ ವಸ್ತುಗಳನ್ನು ಗೋವಾಗೆ ತರಿಸಿಕೊಂಡು ಬಳಿಕ ದೇಶದ ವಿವಿಧ ನಗರಗಳಲ್ಲಿರುವ ಸಬ್‌ ಡೀಲರ್‌ಗಳಿಗೆ ಪೂರೈಸುತ್ತಿದ್ದ. ಆರೋಪಿ ಜೋ ಈತನಿಂದ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ ಎಂಡಿಎಂಎ ಎಕ್ಸ್‌ಟೆಸಿ ಮಾತ್ರೆಗಳನ್ನು ಖರೀದಿಸುತ್ತಿದ್ದ. ಬಳಿಕ ನಗರದ ಐಟಿ-ಬಿಟಿ ಉದ್ಯೋಗಿಗಳು(IT-BT Employees) ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ(Students) ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೊಂದು ವ್ಯವಸ್ಥಿತ ಈ ಡ್ರಗ್‌ ಪೆಡ್ಲಿಂಗ್‌ ಜಾಲವಾಗಿದೆ. ವಿಚಾರಣೆ(Inquiry) ವೇಳೆ ಆರೋಪಿ ಜೋ ನೀಡಿದ ಮಾಹಿತಿ ಆಧರಿಸಿ ಇತರೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯಲ್ಲೇ ಡ್ರಗ್‌ ಮಾರುತ್ತಿದ್ದವನ ಬಂಧನ

ರಸ್ತೆಯ ಬದಿಯಲ್ಲಿ ಗ್ರಾಹಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೆಸ್ಟ್‌ ನೈಜೀರಿಯಾ(Nigeria) ಮೂಲದ ಡ್ರಗ್ಸ್‌ ಪೆಡ್ಲರ್‌ನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.(Arrest) ಹೆಣ್ಣೂರು 2ನೇ ಅಡ್ಡರಸ್ತೆ ನಿವಾಸಿ ನೈಮೆಕಾ ಬಾಸಿಲ್‌(30) ಬಂಧಿತ. ಆರೋಪಿಯಿಂದ 40 ಗ್ರಾಂ ತೂಕದ ಎಂಡಿಎಂಎ ಪುಡಿ, ಎಲೆಕ್ಟ್ರಾನಿಕ್‌ ತೂಕದ ಯಂತ್ರ, ಮೊಬೈಲ್‌ ಫೋನ್‌, ಒಂದು ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಳೆದ ಸೋಮವಾರ ಸಂಜೆ 4.30ರ ಸುಮಾರಿನಲ್ಲಿ ರಾಮಮೂರ್ತಿ ನಗರದ ಬಂಜಾರ ಲೇಔಟ್‌ನ ಓಂಶಕ್ತಿ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಡಿಎಂಎಯನ್ನು ಒಂದು ಗ್ರಾಂಗೆ ಒಂದು ಸಾವಿರ ನಿಗದಿ ಮಾಡಿ ಮಾರುತ್ತಿದ್ದ. ಚಿಕ್ಕ ಪ್ಲಾಸ್ಟಿಕ್‌ ಕವರ್‌ನಲ್ಲಿ ಎಂಡಿಎಂಎ ಪುಡಿ ಹಾಕಿ ಪ್ಯಾಂಟಿನ ಜೇಬಿನಲ್ಲಿ ಇರಿಸಿಕೊಂಡು ರಸ್ತೆಯಲ್ಲಿ ಬರುವ ಗ್ರಾಹಕರಿಗೆ(Customers) ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಿದಾಗ ಮಾದಕವಸ್ತು ಖರೀದಿಗೆ ಬಂದಿದ್ದ ಗ್ರಾಹಕರು ಪರಾರಿಯಾಗಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಕಳೆದ ಎರಡು ವರ್ಷಗಳಿಂದ ಡ್ರಗ್‌ ಪೆಡ್ಲಿಂಗ್‌ನಲ್ಲಿ ಭಾಗಿಯಾಗಿದ್ದೇನೆ. ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿರುವುದಾಗಿ ಹೇಳಿದ್ದಾನೆ. ವೀಸಾ ಹಾಗೂ ಪಾಸ್‌ಪೋರ್ಟ್‌(Passport) ಬಗ್ಗೆ ವಿಚಾರಿಸಿದಾಗ ಅವಧಿ ಮುಗಿದಿರುವುದಾಗಿ ಹೇಳಿದ್ದಾನೆ. ಇದರ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ(Investigation) ಮುಂದುವರಿಸಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.