ಮಂಗ್ಳೂರು ಕುಕ್ಕರ್ ಬಾಂಬ್ ಸ್ಫೋಟ: 'ಕದ್ರಿ ಮಂಜುನಾಥ ದೇವಸ್ಥಾನವೇ' ಉಗ್ರನ ಟಾರ್ಗೆಟ್ ಆಗಿತ್ತಂತೆ..!
ರಾಷ್ಟ್ರೀಯ ತನಿಖಾ ದಳವೇ ಅಧಿಕೃತವಾಗಿ ಕುಕ್ಕರ್ ಬಾಂಬರ್‌ನ ಟಾರ್ಗೆಟ್ ಆಗಿದ್ದ ಜಾಗದ ಹೆಸರನ್ನು ರಿವೀಲ್ ಮಾಡಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನವೇ ಕುಕ್ಕರ್ ಬಾಂಬ್ ಶಾರೀಕ್‌ನ ಟಾರ್ಗೆಟ್ ಆಗಿತ್ತು ಎಂದು ಹೇಳಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು(ಸೆ.15): ಮಂಗಳೂರು ಕುಕ್ಕರ್ ಬಾಂಬರ್‌ನ ಟಾರ್ಗೆಟ್ ಏನಾಗಿತ್ತು ಎಂಬ ಬಗ್ಗೆ ಮಂಗಳೂರಿನ ಹತ್ತು ಹಲವು ಜಾಗಗಳ ಹೆಸರು ಹರಿದಾಡುತ್ತಿತ್ತು. ಆದರೆ ಇದೀಗ ರಾಷ್ಟ್ರೀಯ ತನಿಖಾ ದಳವೇ ಅಧಿಕೃತವಾಗಿ ಕುಕ್ಕರ್ ಬಾಂಬರ್‌ನ ಟಾರ್ಗೆಟ್ ಆಗಿದ್ದ ಜಾಗದ ಹೆಸರನ್ನು ರಿವೀಲ್ ಮಾಡಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನವೇ ಕುಕ್ಕರ್ ಬಾಂಬ್ ಶಾರೀಕ್‌ನ ಟಾರ್ಗೆಟ್ ಆಗಿತ್ತು ಎಂದು ಹೇಳಿದೆ.
ನಿನ್ನೆ ಕುಕ್ಕರ್ ಬಾಂಬ್ ಬ್ಲಾಸ್ಟ್‌ನ ಮಾಸ್ಟರ್ ಮೈಂಡ್ ಅರೆಸ್ಟ್ ಆದ ಬೆನ್ನಲ್ಲೇ ಮಂಗಳೂರು ಬ್ಲಾಸ್ಟ್ ಟಾರ್ಗೆಟ್ ಬಹಿರಂಗವಾಗಿದೆ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೇ ಟಾರ್ಗೆಟ್ ಆಗಿತ್ತು ಅಂತ ಎನ್ಐಎ ಹೇಳಿದೆ. ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನದ ಕುರಿತ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಕದ್ರಿ ಟಾರ್ಗೆಟ್ ಆಗಿತ್ತು ಅಂತ ಎನ್ಐಎ ಹೇಳಿಕೊಂಡಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನದ ಐಎಸ್ಐ ಲಿಂಕ್?
ನಿನ್ನೆ ದೆಹಲಿ ಏರ್ಪೋರ್ಟ್‌ನಲ್ಲಿ ಅರಾಫತ್ ಆಲಿಯನ್ನ ಎನ್ಐಎ ವಶಕ್ಕೆ ಪಡೆದಿತ್ತು. ಕೀನ್ಯಾದಿಂದ ವಾಪಾಸ್ ಆಗ್ತಿದ್ದ ವೇಳೆ ಅರಾಫತ್ ಆಲಿ ಅರೆಸ್ಟ್ ಆಗಿದ್ದ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಆಗಿರೋ ಅರಾಫತ್ ಆಲಿ, ವಿದೇಶದಲ್ಲಿ ಕುಳಿತು ಯುವಕರನ್ನು ಉಗ್ರ ಕೃತ್ಯಗಳಿಗೆ ಪ್ರಚೋದಿಸಿದ್ದ. ಪ್ರಚೋದನೆಗೆ ಒಳಗಾಗಿ ಶಿವಮೊಗ್ಗ, ಮಂಗಳೂರಿನಲ್ಲಿ ಶಾರೀಕ್ ಟೀಂನಿಂದ ಉಗ್ರ ಕೃತ್ಯದ ಪ್ಲಾನ್ ರೂಪಿಸಲಾಗಿತ್ತು. ಮೊದಲ ಬಾರಿಗೆ ಮಾಝ್ ಮುನೀರ್ ಮತ್ತು ಯಾಸೀನ್ ನಿಂದ ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ ಬರೆಯಲಾಗಿತ್ತು. ಆ ಬಳಿಕ ಶಿವಮೊಗ್ಗದಲ್ಲಿ ಶಾರೀಕ್ ಜೊತೆ ಸೇರಿಕೊಂಡು ಟ್ರಾಯಲ್ ಬ್ಲಾಸ್ಟ್ ಮಾಡಿದ್ದ. ಕೊನೆಗೆ ನ.19, 2022ರಂದು ಕುಕ್ಕರ್ ಬಾಂಬ್ ಸ್ಪೋಟಿಸಲು ಶಾರೀಕ್ ಸಂಚು ರೂಪಿಸಿದ್ದ.
ಆಟೋ ರಿಕ್ಷಾದಲ್ಲಿ ಬಾಂಬ್ ತರುವ ವೇಳೆ ನಾಗುರಿ ಎಂಬಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಆದರೆ ಶಾರೀಕ್ ಟಾರ್ಗೆಟ್ ಏನಾಗಿತ್ತು ಎಂಬ ಬಗ್ಗೆ ಗೊಂದಲಗಳಿತ್ತು. ಕದ್ರಿ ದೇವಸ್ಥಾನ ಸೇರಿ ಮಂಗಳೂರಿನ ಹಲವು ಜಾಗಗಳು ಶಾರೀಕ್ ಟಾರ್ಗೆಟ್ ಎನ್ನಲಾಗಿತ್ತು. ಈ ಮಧ್ಯೆ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್, ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದು ಕದ್ರಿ ದೇವಸ್ಥಾನ ಅಂತ ಪೋಸ್ಟ್ ಹಾಕಲಾಗಿತ್ತು. ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ಆಗಿತ್ತು ಎಂದಿದ್ದರು ಉಗ್ರರು. ಆ ಬಳಿಕ ಉಗ್ರ ಶಾರೀಕ್ ವಶಕ್ಕೆ ಪಡೆದು ಬೆಂಗಳೂರಿಗೆ ಕರೆಸಿಕೊಂಡಿದ್ದ ಎನ್ಐಎ ವಿಚಾರಣೆ ನಡೆಸಿತ್ತು. ಎನ್ಐಎ ತನಿಖೆ ವೇಳೆ ಶಾರೀಕ್ ಕುಕ್ಕರ್ ಬ್ಲಾಸ್ಟ್ ಟಾರ್ಗೆಟ್ ಬಹಿರಂಗವಾಗಿದ್ದು, ಕದ್ರಿ ದೇವಸ್ಥಾನ ಟಾರ್ಗೆಟ್ ಆಗಿತ್ತು ಅಂತ ಶಾರೀಕ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಯಾರೀತ ಅರಫತ್ ಆಲಿ?
ಅರಾಫತ್ ಆಲಿ 2020 ರಿಂದ ತಲೆಮರೆಸಿಕೊಂಡಿದ್ದು, ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಐಸಿಸ್ ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ. ಶಿವಮೊಗ್ಗ ಜಿಲ್ಲೆಯ ನಿವಾಸಿ ಅರಾಫತ್ ಅಲಿ ವಿದೇಶದಲ್ಲಿ ಕುಳಿತು ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಿಸುವಲ್ಲಿ ಸಕ್ರಿಯವಾಗಿದ್ದ. ಎನ್ಐಎ ತನಿಖೆಯ ಪ್ರಕಾರ, 2020 ರ ಎರಡು ಮಂಗಳೂರು ಗೋಡೆ ಬರಹ ಪ್ರಕರಣಗಳಿಗೆ ಅರಾಫತ್ ಅಲಿ ಮಾಸ್ಟರ್ ಮೈಂಡ್ ಆಗಿದ್ದು, ಅತನ ನಿರ್ದೇಶನದ ಮೇರೆಗೆ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಹಾಗೂ ಇತರ ಇಬ್ಬರು ಆರೋಪಿಗಳು "ಲಷ್ಕರ್ ಅವರನ್ನು ಆಹ್ವಾನಿಸಲು ನಮ್ಮನ್ನು ಒತ್ತಾಯಿಸಬೇಡಿ- ಲಷ್ಕರ್-ಇ-ತೈಬಾ ಮತ್ತು ತಾಲಿಬಾನ್‌ಗಳು ಸಂಘಿಗಳು ಮತ್ತು ಮನುವಾದಿಗಳೊಂದಿಗೆ ವ್ಯವಹರಿಸಲು ಗೋಡೆಗಳ ಮೇಲೆ ಲಷ್ಕರ್ ಜಿಂದಾಬಾದ್' ಎಂದು ಬರೆದಿದ್ದರು.