* ಎನ್‌ಐಎ ಮಿಂಚಿನ ಕಾರ್ಯಾಚರಣೆ* 4 ತಂಡಗಳಾಗಿ ದಿಢೀರ್‌ ದಾಳಿ ನಡೆಸಿದ ಎನ್‌ಐಎ ತಂಡ* ಭಟ್ಕಳ ಪಟ್ಟಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌, ಎಸ್ಪಿ ಮೊಕ್ಕಾಂ 

ಭಟ್ಕಳ(ಆ.07): ಸಿರಿಯಾ ಮೂಲದ ಐಸಿಸ್‌ ಹಾಗೂ ಉಗ್ರ ಸಂಘಟನೆಗಳ ಸಂಬಂಧವಿರುವವರ ಜತೆ ನಂಟಿರುವ ಶಂಕೆಯ ಮೇರೆಗೆ ದೆಹಲಿ ಹಾಗೂ ಮುಂಬೈನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ತಂಡ ಸ್ಥಳೀಯ ಪೊಲೀಸರ ಸಹಕಾರದಿಂದ ಶುಕ್ರವಾರ ಭಟ್ಕಳದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದೆ.

ಸಾಕಷ್ಟು ಪೂರ್ವ ತಯಾರಿಯೊಂದಿಗೆ ಎನ್‌ಐಎ ಈ ದಾಳಿ ನಡೆಸಿದ್ದು ಇದೀಗ ಭಟ್ಕಳ ಮತ್ತೆ ದೇಶಾದ್ಯಂತ ಸುದ್ದಿಯಾಗಿದೆ. ಅದರಲ್ಲಿ ಸಾಗರಸ್ತೆಯ ಮನೆಯ ಇಬ್ಬರು, ಉಮ್ಮರ್‌ ಸ್ಟ್ರೀಟಿನ ಮನೆಯ ಒಬ್ಬನನ್ನು ಸೇರಿ ಒಟ್ಟೂ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಎನ್‌ಐಎ ತಂಡ ತೆಂಗಿನಗುಂಡಿ ಕ್ರಾಸಿನಲ್ಲಿರುವ ಮನೆಯೊಂದಕ್ಕೆ ಹೋಗಿ ವಿಚಾರಣೆ ನಡೆಸಿದ್ದಾರೆ. ಬಳಿಕ ಒಬ್ಬನನ್ನು ಬಂಧಿಸಿದೆ.

ಈಗಾಗಲೇ ಕಳೆದ ಕೆಲ ವರ್ಷಗಳಿಂದ ಉಗ್ರಗಾಮಿ ಚಟುವಟಿಕೆಯ ನಂಟಿನ ಆರೋಪದ ಮೇರೆಗೆ ಸಾಗರ ರಸ್ತೆಯಲ್ಲಿರುವ ಅದ್ನಾನ್‌ ದಾಮುದಿ ಎಂಬಾತ ಬಂಧನದಲ್ಲಿದ್ದು, ಇದೀಗ ಈತನಿಗೆ ಸಂಬಂಧಪಟ್ಟವರ ಮನೆ, ಕಚೇರಿ ಹಾಗೂ ಇತರ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ಸಂದರ್ಭದಲ್ಲಿ ಕೆಲವರ ಮೊಬೈಲ್‌ ಕೂಡ ವಶಪಡಿಸಿಕೊಂಡಿರುವ ಬಗ್ಗೆಯೂ ಗೊತ್ತಾಗಿದೆ. ಶುಕ್ರವಾರ ಬಂಧಿತ ಜಾಫ್ರಿಯಾ ದಾಮೂದಿ ಎಂಬಾತ ಈ ಹಿಂದೆ ಉಗ್ರ ಕೃತ್ಯದ ಆರೋಪದಲ್ಲಿ ಬಂಧಿತನಾಗಿದ್ದ ಅದ್ನಾನ್‌ ದಾಮೂದಿಯ ಸಹೋದರನಾಗಿದ್ದಾನೆ.

ಉಗ್ರ ನಂಟು; NIAಯಿಂದ ಭಟ್ಕಳದಲ್ಲಿ ಮೂವರು ವಶಕ್ಕೆ

ಜಾಫ್ರಿಯಾ ಮೇಲೆ 2 ವರ್ಷದಿಂದ ಕಣ್ಣಿಟ್ಟಿದ್ದ ಎನ್‌ಐಎ!

ಎನ್‌ಐಎ ತಂಡ ಶುಕ್ರವಾರ ಬಂಧಿಸಿದ ಜಾಫ್ರಿಯಾ ಮೇಲೆ ಕಳೆದ ಎರಡು ವರ್ಷಗಳಿಂದ ಕಣ್ಣಿಟ್ಟಿದ್ದ ಅಂಶ ಬಯಲಾಗಿದೆ. ಜಾಫ್ರಿಯಾ ಸಂಪೂರ್ಣ ಚಟುವಟಿಕೆಗಳು, ಇವರ ಈ-ಮೇಲ್‌ ಹಾಗೂ ಅಂತರ್‌ಜಾಲದ ಎಲ್ಲ ಚಟುವಟಿಕೆಗಳನ್ನು ಕೂಡಾ ನಿಗಾ ವಹಿಸಲಾಗಿತ್ತು ಎನ್ನಲಾಗಿದೆ. ವಾಟ್ಸಾಪ್‌ ಗ್ರೂಪ್‌ನಲ್ಲಿಯೂ ಕಳುಹಿಸಿರುವ ಮೆಸೇಜ್‌ಗಳು ಎನ್‌ಐಎಗೆ ಲಭ್ಯವಾಗಿದೆ. ಸಾಕಷ್ಟುಪೂರ್ವ ತಯಾರಿಯಿಂದ ಈ ದಾಳಿ ನಡೆಸಲಾಗಿದೆ. ದಾಳಿಯ ಕಾಲಕ್ಕೆ ಜಿಹಾದಿ ಬರವಣಿಗೆಗಳೂ ಕೂಡಾ ಎನ್‌ಐಎ ತಂಡಕ್ಕೆ ಲಭ್ಯವಾಗಿದೆ ಎಂದು ಮಾಹಿತಿ ಲಭಿಸಿದೆ.

ಭಟ್ಕಳದಲ್ಲಿ ದಾಳಿ ನಡೆಸಲು ಎರಡು ದಿನಗಳ ಎನ್‌ಐಎ ತಂಡ ಸಿದ್ಧತೆ ನಡೆಸಿತ್ತು. ಶುಕ್ರವಾರ ಮಧ್ಯಾಹ್ನ 1.15ರ ಸುಮಾರಿಗೆ ಎನ್‌ಐಎ ಅಧಿಕಾರಿಗಳ ನೇತೃತ್ವದ ನಾಲ್ಕು ತಂಡಗಳು ಏಕಕಾಲಕ್ಕೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಭಟ್ಕಳ ಪಟ್ಟಣದ ಸಾಗರ ರಸ್ತೆಯ ಸಂಶುದ್ದೀನ ವೃತ್ತದಲ್ಲಿರುವ ಮನೆ, ಉಮ್ಮುರ್‌ಸ್ಟ್ರೀಟ್‌ನಲ್ಲಿರುವ ಮನೆ ಹಾಗೂ ತೆಂಗಿನಗುಂಡಿ ಕ್ರಾಸ್‌ನಲ್ಲಿರುವ ಮನೆಗೆ ದಾಳಿ ನಡೆಸಿದೆ.

ಮಂಗಳೂರಿನಲ್ಲಿ ಮಾಜಿ ಶಾಸಕರ ಮನೆ ಮೇಲೆ NIA ದಾಳಿ : ISIS ನಂಟು - ಓರ್ವ ಅರೆಸ್ಟ್

ಬಿಗಿ ಪೊಲೀಸ್‌ ಬಂದೋಬಸ್ತ್‌:

ಭಟ್ಕಳದಲ್ಲಿ ಎನ್‌ಐಎ ತಂಡ ಐಸೀಸ್‌ ನಂಟು ಆರೋಪದ ಮೇಲೆ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಮು ಸೂಕ್ಷ್ಮ ಪಟ್ಟಣವಾಗಿರುವ ಭಟ್ಕಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಶುಕ್ರವಾರ ಸಂಜೆಯೇ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದು, ಮೀಸಲು ಪಡೆಯ ತುಕಡಿ ಕೂಡಾ ಆಗಮಿಸಿದ್ದು ಸಂಪೂರ್ಣ ನಿಗಾ ವಹಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದು, ಬಂದೋಬಸ್‌್ತ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಭಟ್ಕಳದಲ್ಲಿ ಎನ್‌ಐಎ ತಂಡ ಜಾಫ್ರಿಯಾ ದಾಮೂದಿ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಈತನ ಸಹೋದರ ಕೆಲ ವರ್ಷಗಳ ಹಿಂದೆ ಬಂಧಿತನಾಗಿದ್ದ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶಿವಪ್ರಕಾಶ್‌ ದೇವರಾಜು ತಿಳಿಸಿದ್ದಾರೆ.