ಬೆಂಗಳೂರು(ಅ.09): ‘ಬೆಂಗ​ಳೂರು ಉಗ್ರರ ನೆಲೆ​ವೀ​ಡಾ​ಗು​ತ್ತದೆ’ ಎಂದು ಕೇಂದ್ರ ಸರ್ಕಾ​ರಕ್ಕೆ ಇತ್ತೀ​ಚೆಗೆ ಸಂಸದ ತೇಜಸ್ವಿ ಸೂರ್ಯ ದೂರು ನೀಡಿ​ದ್ದ​ರು. ಇದರ ಬೆನ್ನಲೇ, ವಿಶ್ವದ ರಕ್ತಪಿಪಾಸು ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ನ (ಐಸಿಸ್‌) ಇಬ್ಬರು ಪ್ರಮುಖ ನಾಯ​ಕ​ರನ್ನು ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಗುರು​ವಾ​ರ ಬಂಧಿ​ಸಿ​ದೆ. ಬಂಧಿ​ತ​ರು ಬೆಂಗಳೂರಿನ ಮುಸ್ಲಿಂ ಯುವಕರಿಗೆ ಮೂಲಭೂತವಾದ ಬೋಧಿಸಿ ಸಿರಿಯಾಗೆ ಕಳುಹಿಸುತ್ತಿದ್ದ ಐಸಿ​ಸ್‌ ಗುಂಪಿಗೆ ಸೇರಿದವರು ಎಂದು ತಿಳಿ​ದು​ಬಂದಿ​ದೆ.

ಫ್ರೇಜರ್‌ ಟೌನ್‌ನ ಇರ್ಫಾನ್‌ ನಾಸೀರ್‌ (33) ಹಾಗೂ ತಮಿಳುನಾಡು ರಾಮನಾಥಪುರದ ಅಹ್ಮದ್‌ ಅಬ್ದುಲ್‌ ಖಾದರ್‌ (40) ಬಂಧಿತರು. ಆರೋಪಿಗಳಿಗೆ ಸೇರಿದ ಗುರಪ್ಪನಪಾಳ್ಯ ಹಾಗೂ ಫ್ರೇಜನ್‌ ಟೌನ್‌ಗಳಲ್ಲಿರುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮೊಬೈಲ್‌ ಹಾಗೂ ಹಾರ್ಡ್‌ ಡಿಸ್ಕ್‌ ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ಇಬ್ಬರನ್ನು 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಹೇಳಿದೆ.

ಕೆಲ ದಿನಗಳ ಹಿಂದೆ ಐಸಿಸ್‌ ಸಂಘಟನೆಗೆ ಆ್ಯಪ್‌ ಅಭಿವೃದ್ಧಿಪಡಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಸೆರೆಯಾಗಿದ್ದ ಐಸಿಸ್‌ ಶಂಕಿತ ಉಗ್ರ ಡಾ.ಅಬ್ದುರ್‌ ರೆಹಮಾನ್‌ ಅಲಿಯಾಸ್‌ ‘ಡಾ ಬ್ರೇವ್‌’ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಎನ್‌ಐಎ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ‘ಐಸಿಸ್‌ ಉಗ್ರರ ಕ್ಯಾಂಪ್‌’: ಸ್ಫೋಟಕ ಮಾಹಿತಿ ಬಹಿರಂಗ..!

ಬೆಂಗಳೂರು ಐಸಿಸ್‌ ಘಟ​ಕ​ವಾ​ದ ‘ಕುರಾನ್‌ ಸರ್ಕಲ್‌’ ವಿರುದ್ಧ ಸ್ವಯಂ ಪ್ರೇರೇರಿತವಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಯಿತು. ವಿಚಾರಣೆ ವೇಳೆ ಅಬ್ದುಲ್‌ ರೆಹ​ಮಾನ್‌, ತನ್ನ ಸಹಚರರ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೆ ಸಿರಿಯಾಗೆ ತೆರಳಲು ಆರ್ಥಿಕ ನೆರವಿನ ಮೂಲವು ಬಹಿರಂಗಪಡಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

‘ಕುರಾನ್‌ ಸರ್ಕಲ್‌’ ಕೆಲ​ಸ​ವೇ​ನು?:

ತಮಿಳುನಾಡಿನ ಅಹ್ಮದ್‌ ಅಬ್ದುಲ್‌ ಖಾದರ್‌, ಚೆನ್ನೈನಲ್ಲಿ ಖಾಸಗಿ ಬ್ಯಾಂಕ್‌ವೊಂದರಲ್ಲಿ ಉದ್ಯೋಗದಲ್ಲಿದ್ದ. ಬೆಂಗಳೂರಿನಲ್ಲಿ ಇರ್ಫಾನ್‌ ನಾಸೀರ್‌ ಅಕ್ಕಿ ವ್ಯಾಪಾರಿಯಾಗಿದ್ದಾನೆ.

ಇಸ್ಲಾಂ ಮೂಲಭೂತವಾದದ ಬಗ್ಗೆ ವಿಪರೀತ ಒಲವು ಬೆಳೆಸಿಕೊಂಡಿದ್ದ ಈ ಇಬ್ಬರು, ‘ಮುಸ್ಲಿಂ ಅಸ್ಮಿತೆಗೆ ಹೋರಾಟ ನಡೆಸಿದೆ’ ಎಂದು ಐಸಿಸ್‌ ಬಲವರ್ಧನೆಗೆ ಯತ್ನಿಸಿದ್ದರು. ತರುವಾಯ ಸಿರಿಯಾದಲ್ಲಿರುವ ಐಸಿಸ್‌ ಭಯೋತ್ಪಾದಕ ಸಂಘಟನೆ ನಾಯಕರ ಸಂಪರ್ಕ ಸಾಧಿಸಿದ ಅಬ್ದುಲ್‌ ಹಾಗೂ ಇರ್ಫಾನ್‌, ನಂತರ ಬೆಂಗಳೂರಿನಲ್ಲಿ ಐಸಿಸ್‌ ಸಂಘಟನೆಗೆ ಮುಸ್ಲಿಂ ಯುವಕರ ನೇಮಕಾತಿಗೆ ಯೋಜಿಸಿದ್ದರು. ಅಂತೆಯೇ ಮುಸ್ಲಿಂ ಯುವಕರನ್ನು ಧರ್ಮ ಬೋಧನೆ ನೆಪದಲ್ಲಿ ಐಸಿಸ್‌ ಒಲವು ಮೂಡಿಸುತ್ತಿದ್ದರು. ಹೀಗೆ ತಮ್ಮ ಬಲೆಗೆ ಬಿದ್ದು ಮೂಲಭೂತವಾದಿಗಳಾಗಿ ಪರಿವರ್ತನೆಗೊಂಡವರನ್ನು ಐಸಿಸ್‌ ತರಬೇತಿಗೆ ಸಿರಿಯಾಗೆ ಆರೋಪಿಗಳು ಕಳುಹಿಸುತ್ತಿದ್ದರು ಎಂದು ಎನ್‌ಐಎ ಮೂಲಗಳು ಹೇಳಿವೆ.

ಇದಕ್ಕಾಗಿ ಹಿಜ್ಬ್-ಉತ್‌-ತೆಹ್ರೀರ್‌ ಎಂಬ ಗುಂಪು ಕಟ್ಟಿಕೊಂಡಿದ್ದ ಆರೋಪಿಗಳು, ಬಳಿಕ ‘ಕುರಾನ್‌ ಸರ್ಕಲ್‌’ ಎಂಬ ಗುಪ್ತನಾಮದಲ್ಲಿ ಸಂಘಟನೆ ಚಟುವಟಿಕೆಯಲ್ಲಿ ನಡೆಸಿದ್ದರು. ಇವರ ಬಗ್ಗೆ ಡಾ ರೆಹ​ಮಾನ್‌ ಸುಳಿ​ವು:

ಇತ್ತೀಚಿಗೆ ಬೆಂಗಳೂರಿನಲ್ಲಿ ಐಸಿಸ್‌ ಸಂಘಟನೆಗೆ ಆ್ಯಪ್‌ ಅಭಿವೃದ್ಧಿಪಡಿಸಲು ಸಿಕ್ಕಿಬಿದ್ದ ಡಾ.ಅಬ್ದುರ್‌ ರೆಹಮಾನ್‌ನನ್ನು 2014ರಲ್ಲಿ ಸಿರಿಯಾಗೆ ಕಳುಹಿಸಲಾಗಿತ್ತು. ವಿಚಾರಣೆ ವೇಳೆ ತನ್ನ ಸಿರಿಯಾ ಯಾತ್ರೆ ಹಿಂದಿರುವ ನೆರವಿನ ಹಸ್ತವನ್ನು ಆತ ಬಹಿರಂಗಪಡಿಸಿದ್ದ. ಬಳಿಕ ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಬೆಂಗಳೂರಿನಲ್ಲಿ ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆ ನೇಮಕಾತಿಯಲ್ಲಿ ಇರ್ಫಾನ್‌ ಹಾಗೂ ಅಬ್ದುಲ್‌ ಬಹುಮುಖ್ಯ ಪಾತ್ರವಹಿಸಿದ್ದಾರೆ. ಹೀಗೆ ಸಿರಿಯಾಗೆ ಹೋಗಿದ್ದ ಇಬ್ಬರು ಯುವಕರು ಅಲ್ಲಿ ಹತ್ಯೆಗೀಡಾಗಿದ್ದರು. ಸಿರಿಯಾಗೆ ಯುವಕರ ಕಳುಹಿಸಲು ಅಗತ್ಯವಾಗಿರುವ ಆರ್ಥಿಕ ನೆರವನ್ನು ಆರೋಪಿಗಳು ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.