ಗಂಗಾವತಿ: ಕಳುವು ಕೇಸ್ ಭೇದಿಸಿದಾಗ ಕೊಲೆ ಪ್ರಕರಣ ಬೆಳಕಿಗೆ..!
ಸಹಜ ಸಾವೆಂದು ಅಂತ್ಯಕ್ರಿಯೆ ಮಾಡಿದ್ದ ಕುಟುಂಬಸ್ಥರು| ಪೊಲೀಸ್ ತನಿಖೆಯಲ್ಲಿ ಕೊಲೆ ಪ್ರಕರಣ ಬಹಿರಂಗ| ಹೂಳಲಾಗಿದ್ದ ಮಹಿಳೆಯ ಶವ ಹೊರತೆಗೆದು ಶವ ಪರೀಕ್ಷೆ| ಹಣ ಮತ್ತು ಚಿನ್ನದ ಆಸೆಗಾಗಿ ವೃದ್ಧೆಯ ಕತ್ತು ಹಿಸುಕಿ ಕೊಲೆ|
ಗಂಗಾವತಿ(ಮಾ.10): ವೃದ್ಧೆಯೊಬ್ಬರ ಸಹಜ ಸಾವಿನ ಪ್ರಕರಣವೊಂದು ಹೊಸ ತಿರುವು ಪಡೆದಿದ್ದು, ಚಿನ್ನ, ಹಣದಾಸೆಗಾಗಿ ವೃದ್ಧೆಯನ್ನು ಕೊಲೆ ಮಾಡಲಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಹೂಳಲಾಗಿದ್ದ ಮಹಿಳೆಯ ಶವ ಹೊರತೆಗೆದು ಶವ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ಕಳ್ಳತನ ಪ್ರಕರಣ ಭೇದಿಸಿದಾಗ ಕೊಲೆ ಪ್ರಕರಣವೂ ಬೆಳಕಿಗೆ ಬಂದಿದೆ.
ನಗರದ ಉದ್ಯಮಿ ದುರಗಪ್ಪ ಅಮರಜ್ಯೋತಿ ಅವರ ಪತ್ನಿ ಶಿವಮ್ಮ (70) ಮಾ. 5ರಂದು ಸಾವಿಗೀಡಾಗಿದ್ದರು. ವಯೋ ಸಹಜದಿಂದಾಗಿ ಮೃತಪಟ್ಟಿರುವುದರ ಬಗ್ಗೆ ಕುಟುಂಬದವರು ತಿಳಿಸಿ ಶವಸಂಸ್ಕಾರ ಮಾಡಿದ್ದರು. ವೃದ್ಧೆ ಸಾವಿನ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ಮೃತರ ಕುಟುಂಬದವರ ಅಚ್ಚರಿಗೆ ಕಾರಣವಾಗಿದೆ.
ಪ್ರಕರಣ ಪತ್ತೆಯಾಗಿದ್ದು ಹೀಗೆ..:
ಮೃತ ಶಿವಮ್ಮನ ಮನೆಯಲ್ಲಿ ಲಕ್ಷಾಂತರ ರುಪಾಯಿ ಮೊತ್ತದ ಚಿನ್ನ, ಬೆಳ್ಳಿ ಸೇರಿದಂತೆ ನಗ ನಾಣ್ಯಗಳ ಕಳ್ಳತನವಾಗಿತ್ತು. ಈ ಬಗ್ಗೆ ಮೃತ ಶಿವಮ್ಮನ ಪತಿ ದುರಗಪ್ಪ ಅಮರಜ್ಯೋತಿ ಅವರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ತನಿಖೆ ಕೈಗೊಂಡಿದ್ದ ನಗರ ಪೊಲೀಸರು ಮನೆಗೆ ಬರುತ್ತಿದ್ದ ಪೂಜಾರಿ ಸರ್ವಜ್ಞನನ್ನು ಠಾಣೆಗೆ ಕರೆದು ವಿಚಾರಣೆ ಕೈಗೊಂಡಾಗ ವೃದ್ಧೆಯ ಕೊಲೆ, ಕಳ್ಳತನ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ರೂಮಿನಲ್ಲಿದ್ದ 80 ಸಾವಿರ ನಗದು, 2 ತೊಲೆ ಚಿನ್ನದ ಉಂಗುರಗಳು, 3 ತೊಲೆ ಚಿನ್ನದ ಚೈನ್ ಸೇರಿದಂತೆ 3.40 ಲಕ್ಷ ಮೊತ್ತದ ಚಿನ್ನದ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ತನಿಖೆಯಲ್ಲಿ ತಿಳಿಸಿದ್ದಾನೆ.
ಚಾಮರಾಜನಗರ; ಬಾಗಿಲಿನಲ್ಲಿ ಸೊಸೆ ಹೆಣ..ಕೋಣೆಯೊಳಗೆ ಮಾವನ ಶವ!
ಸಿಸಿ ಕ್ಯಾಮೆರಾಕ್ಕೆ ವಸ್ತ್ರ:
ಮೃತ ಶಿವಮ್ಮನ ಮನೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಳ್ಳತನ ಮಾಡಿದ್ದ ಪೂಜಾರಿ ಸರ್ವಜ್ಞ ಸಿಸಿ ಕ್ಯಾಮೆರಾಕ್ಕೆ ವಸ್ತ್ರ ಮುಚ್ಚಿ ಕಳ್ಳತನ ಮಾಡಿದ್ದಾನೆ. ಇದಕ್ಕಿಂತ ಪೂರ್ವದಲ್ಲಿ ಶಿವಮ್ಮ ಸ್ನಾನಗೃಹಕ್ಕೆ ಹೋಗಿದ್ದ ಸಂದರ್ಭದಲ್ಲಿ ಸರ್ವಜ್ಞನು ಶಿವಮ್ಮನ ಕತ್ತು ಹಿಸುಕಿ ಕೊಲೆ ಮಾಡಿರಬಹುದೆಂದು ಕುಟುಂಬದವರು ದೂರಿದ್ದಾರೆ. ಪೂಜಾರಿಯೇ ಕೊಲೆ ಮಾಡಿ ಶಿವಮ್ಮ ಮೃತಪಟ್ಟಿದ್ದಾರೆಂದು ಎಲ್ಲರಿಗೆ ತಿಳಿಸಿದ್ದಾನೆ. ಶಿವಮ್ಮನ ಇಬ್ಬರು ಪುತ್ರರು ಬೇರೆ ಮನೆಯಲ್ಲಿದ್ದರಿಂದ ವಯೋ ಸಹಜ ಸಾವು ಎಂದು ನಂಬಿಸಿದ್ದಾನೆ. ಸಿಸಿ ಕ್ಯಾಮೆರಾ ಜಾಡು ಹಿಡಿದಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ವೃದ್ಧೆಯದು ಸಹಜ ಸಾವಲ್ಲ, ಕೊಲೆ ಎಂದು ಗೊತ್ತಾಗಿದೆ.
ಹೂತಿಟ್ಟಿದ್ದ ಶವ ಹೊರತೆಗೆದು ಪರೀಕ್ಷೆ:
ಪೊಲೀಸರು ವಿದ್ಯಾನಗರದ ಸ್ಮಶಾನದಲ್ಲಿ ಹೂತಿಟ್ಟಿದ್ದ ವೃದ್ಧೆಯ ಶವ ಹೊರ ತೆಗೆದು ಪರೀಕ್ಷೆ ಮಾಡಿಸಿದ್ದಾರೆ. ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರಡ್ಡಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಮತ್ತು ಪಿಐ ವೆಂಕಟಸ್ವಾಮಿ, ಕೊಪ್ಪಳದ ತಜ್ಞ ವೈದ್ಯ ನೇತೃತ್ವದಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಶಿವಮ್ಮನ ಮನೆಗೆ ಪೂಜೆಗೆ ಬರುತ್ತಿದ್ದ ಸರ್ವಜ್ಞ ಹಣ ಮತ್ತು ಚಿನ್ನದ ಆಸೆಗಾಗಿ ಶಿವಮ್ಮನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಮನೆಯಲ್ಲಿದ್ದ ಚಿನ್ನ ಮತ್ತು ನಗದು ಹಣ ಕಳ್ಳತನ ಮಾಡಿದ್ದು, ತಾನೇ ಕೊಲೆ ಮಾಡಿರುವುದಾಗಿ ಅರೋಪಿ ಒಪ್ಪಿಕೊಂಡಿದ್ದು, ಈತನನ್ನು ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದ್ದಾರೆ.