ಕಡಿಮೆ ಕೂಲಿಗೆ ಮನೆಗೆಲಸಕ್ಕೆ ಸೇರಿದ ನೇಪಾಳಿ ಪೋರಿ: ಮಾಲೀಕನ ಮನೆಗೆ ಕನ್ನ ಹಾಕಿ ಪರಾರಿ
ನೇಪಾಳಿ ಮೂಲದ ಯುವತಿಯರು ಹಾಗೂ ಮಹಿಳೆಯರು ಕಡಿಮೆ ಕೂಲಿಗೆ ಮನೆಗೆಲಸಕ್ಕೆ ಸೇರಿಕೊಂಡು ಮನೆಯಲ್ಲಿನ ಚಿನ್ನ, ಬೆಳ್ಳಿ, ನಗದು ಕದ್ದು ಪರಾರಿ ಆಗುವ ಗ್ಯಾಂಗ್ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಅವರಲ್ಲಿ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮಾ.11): ನೇಪಾಳದಿಂದ ಭಾರತಕ್ಕೆ ಅನಧಿಕೃತವಾಗಿ ನುಸುಳಿ ಬಂದಿರುವ ನೇಪಾಳಿ ಗ್ಯಾಂಗ್‌ನ, ಹುಡುಗಿಯರು ಹಾಗೂ ಮಹಿಳೆಯರು ಕಡಿಮೆ ಕೂಲಿಗೆ ಬೆಂಗಳೂರಿನ ದೊಡ್ಡವರ ಮನೆಗಳಲ್ಲಿ ಕೆಲಸಕ್ಕೆ ಸೇರಿಕೊಂಡು, ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ದೋಚಿ ಪರಾರಿ ಆಗುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ 3 ಪ್ರತ್ಯೇಕ ಪ್ರಕರಣದಲ್ಲಿ ನೇಪಾಳಿ ಗ್ಯಾಂಗ್‌ನ 8 ಜನರನ್ನು ಬಂಧಿಸಲಾಗಿದೆ.
ದೇಶದೊಳಗೆ ಅನಧಿಕೃತವಾಗಿ ಗಡಿಯನ್ನು ದಾಟಿಕೊಂಡು ಬರುವ ನೇಪಾಳಿ ಗ್ಯಾಂಗ್‌ಗಳು ದೊಡ್ಡ ದೊಡ್ಡವರ ಮನೆಯಲ್ಲಿ ಕಡಿಮೆ ಕೂಲಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕೆಲವು ದಿನಗಳಿಂದ ಅವರ ಮನೆಯಲ್ಲಿದ್ದ ಎಲ್ಲರ ವಿಶ್ವಾಸವನ್ನು ಗಳಿಸುತ್ತಾರೆ. ನಂತರ ಮನೆಯ ಮಾಲೀಕರು ಅವರ ಮೇಲೆ ಜವಾಬ್ದಾರಿ ಕೊಟ್ಟು ಬೇರೆಡೆ ಹೋದಾಗ ಇಡೀ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡುತ್ತಿರುವ (ಮನೆಯಲ್ಲಿದ್ದ ದುಬಾರಿ, ಬೆಲೆ ಬಾಳುವ ವಸ್ತುಗಳಾದ ಬಂಗಾರ, ಬೆಳ್ಳಿ, ಹಣ, ಸೀರೆ ಸೇರಿ ಅನೇಕ ವಸ್ತುಗಳನ್ನು ಕದ್ದುಕೊಂಡು ಓಡಿ ಹೋಗುವುದು) ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
Bengaluru News: ಮನೆ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿದ್ದ ನೇಪಾಳಿ ದಂಪತಿ ಬಂಧನ
ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್ ಬಂಧನ: ಜೆ.ಪಿ.ನಗರ ಠಾಣಾ ಪೊಲೀಸರು ನೇಪಾಳ ಮೂಲದ 8 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಅಂಜಲಿ(31), ಅಬೇಶ್ ಶಾಹಿ (21), ಲಕ್ಷ್ಮಿ ಸೇಜುವಲ್ (33), ನೇತ್ರಾ ಶಾಹಿ (43), ಗೋರಕ್ ಬಹದ್ದೂರ್ (50), ಭೀಮ್ ಬಹದ್ದೂರ್ (45), ಪ್ರಶಾಂತ್ (21) ಹಾಗೂ ಪ್ರಕಾಶ್ (31) ಬಂಧಿತ ಆರೋಪಿಗಳು ಆಗಿದ್ದಾರೆ. ಈ ನೇಪಾಳಿ ಗ್ಯಾಂಗ್‌ನಿಂದ ಸುಮಾರು 2 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
2 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ: ನೇಪಾಳ ಮೂಲದ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ಎಂಬ ಆರೋಪಿಗಳು ಬೆಂಗಳೂರಿನ ಕಿರಣ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದರು. ಇತ್ತೀಚೆಗೆ ಕಿರಣ್ ಹಾಗೂ ಅವರ ಪೋಷಕರು ತಿರುಪತಿಗೆ ತೆರಳಿದ್ದಾಗ ಮನೆಯಲ್ಲಿದ್ದ ಎಲ್ಲ ಬೆಲೆ ಬಾಳುವ ವಸ್ತುಗಳನ್ನು ಕೂಡ ಕದ್ದು ಒಯ್ದಿದ್ದಾರೆ. ಈ ಕುರಿತು ಕಿರಣ್ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಂಧಿತರಿಂದ 1 ಕೆಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ವೃದ್ಧೆಯ ಮನೆಯಲ್ಲಿ ಅರ್ಧ ಕೆ.ಜಿ ಚಿನ್ನಾಭರಣ ಕಳ್ಳತನ: ಜೆಪಿ ನಗರದಲ್ಲಿ ಬ್ರಿಜ್ ಭೂಷಣ್ ಹಾಗೂ ಅವರ ತಾಯಿ ಮನೆಯಲ್ಲಿ ವಾಸವಾಗಿದ್ದರು. ವೃದ್ಧ ತಾಯಿಗೆ ಕೆಲಸ ಮಾಡಲು ಆಗುವುದಿಲ್ಲವೆಂದು ಕಡಿಮೆ ವೇತನಕ್ಕೆ ನೇಪಾಳ ಮೂಲದ ವಿಮಲಾ ಎಂಬಾಕೆಯನ್ನು ಮನೆಗೆಲಸಕ್ಕೆ ಸೇರಿಸಿಕೊಂಡಿದ್ದರು. ಕೆಲವು ದಿನಗಳು ಕೆಲಸವನ್ನು ಮಾಡಿದ ನಂತರ ಒಂದು ದಿನ ಮನೆಯ ಮಾಲೀಕ ಕೆಲಸಕ್ಕೆ ಹೊರ ಊರಿಗೆ ಹೋಗಿದ್ದ ವೇಳೆ ಮನೆಯಲ್ಲಿ ವೃದ್ಧೆ ಒಬ್ಬರೇ ಇದ್ದಾರೆ. ಈ ವೇಳೆ ಕೆಲಸದಾಕೆ ತನ್ನ ದೇಶದ ಇತರೆ ಸದಸ್ಯರನ್ನು ಮನೆಗೆ ಕರೆಸಿಕೊಂಡು ಕೈಗೆ ಸಿಕ್ಕಿದ್ದನ್ನಲ್ಲವನ್ನೂ ದೋಚಿಕೊಂಡು ಪರಾರಿ ಆಗಿದ್ದಾರೆ. ಇನ್ನು ಅವರನ್ನು ಹುಡುಕಿಕೊಂಡು ಬರುವುದಕ್ಕೆ ಸೂಕ್ತ ವಿಳಾಸವೂ ಇಲ್ಲದೆ ಮನೆ ಮಾಲೀಕರು ಪೊಲೀಸರ ಮೊರೆ ಹೋಗಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳತನ ಮಾಡಿದ ನೆಪಾಳಿ ಗ್ಯಾಂಗ್ ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಹಾಗೂ ರಮಿತ ಠಾಕೂರ್‌ನನ್ನು ಬಂಧಿಸಿದ್ದಾರೆ. ಬಂಧಿತರಿಂದ 320 ಗ್ರಾಂ ಚಿನ್ನಾಭರಣ, 6.12 ಲಕ್ಷ ನಗದು, 197 ಗ್ರಾಂ ಬೆಳ್ಳಿ ವಸ್ತು ವಶಪಡಿಸಿಕೊಳ್ಳಲಾಗಿದೆ.
ಜಯನಗರ ಒಬೇದುಲ್ಲಾ ಖಾನ್ ಮನೆ ದರೋಡೆ: ಬೆಂಗಳೂರಿನ ಜಯನಗರದಲ್ಲಿ ವಾಸವಿದ್ದ ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ನೇಪಾಳ ಮೂಲದ ಬಿಕಾಸ್ ಹಾಗೂ ಸುಷ್ಮಿತಾ ದಂಪತಿ ಮನೆಗೆಲಸಕ್ಕೆ ಸೇರಿಕೊಂಡಿದ್ದಾರೆ. ಇವರು ಮನೆಯಲ್ಲಿದ್ದವರ ವಿಶ್ವಾಸವನ್ನು ಗಳಿಸಿಕೊಂಡು ಆರಂಭದ ಕೆಲವು ತಿಂಗಳು ಕೆಲಸ ಮಾಡಿದ್ದಾರೆ. ಇನ್ನು ಮನೆಯವರು ಬೇರೆಡೆ ಹೋದ ಸಂದರ್ಭದಲ್ಲಿ ನೇಪಾಳಿ ಗ್ಯಾಂಗ್ ಇತರೆ ಸದಸ್ಯರಾದ ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಅವರನ್ನು ಕರೆಸಿಕೊಂಡು ಕಳ್ಳತನ ಮಾಡಿದ್ದಾರೆ. ಜಯನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 292 ಗ್ರಾಂ ಚಿನ್ನಾಭರಣ, 15 ಸಾವಿರ ನಗದು, 168 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ವಿವಿಧ ಬ್ರ್ಯಾಂಡ್‌ನ 18 ವಾಚ್‌ಗಳು, ಟ್ಯಾಬ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
22 ವರ್ಷದವನಿಗೆ 48 ವರ್ಷದ ಆಂಟಿ ಮೇಲೆ ಮೋಹ: ಎಲ್ಲಾ ಮುಗಿದ ಮೇಲೆ ಅವಳನ್ನೇ ಮುಗಿಸಿಬಿಟ್ಟ!
ಈ ಜಿಲ್ಲೆಗಳ ಜನರೇ ಎಚ್ಚರದಿಂದಿರಿ: ನಮ್ಮ ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ - ಧಾರವಾಡ, ರಾಮನಗರ ಸೇರಿ ಬಹುತೇಕ ಪ್ರದೇಶಗಳಲ್ಲಿ ನೇಪಾಳಿ ಮೂಲದ ಅನೇಕ ಜನರು ದೊಡ್ಡ ದೊಡ್ಡ ಮನ ಎಗಳು, ತೋಟದ ಮನೆಗಳು ಹಾಗೂ ಇತರೆ ಕಡೆಗಳಲ್ಲಿ ಕಡಿಮೆ ಕೆಲಸಕ್ಕೆ ಬಂದು ಕೆಲಸ ಮಾಡುತ್ತಾರೆ. ಇನ್ನು ಕೆಲವು ಯುವತಿಯರು ಮನೆ, ಸ್ಪಾ, ಬ್ಯೂಟಿ ಪಾರ್ಲರ್ ಸೇರಿ ವಿವಿಧೆಡೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇನ್ನು ಕಡಿಮೆ ಕೂಲಿಗೆ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳುವ ಆಸೆಯಿಂದ ದೊಡ್ಡ ಜನರು ನೇಪಾಳಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಆದರೆ, ಮುಂದಾಗುವ ದುರಂತವನ್ನು ಅನುಭವಿಸಿದ ನಂತರ ಪೊಲೀಸ್ ಠಾಣೆಗೆ ದೂರು ಕೊಟ್ಟು ಗೋಳಾಡುತ್ತಾರೆ.