ಇಲ್ಲಿನ ರಾಮಾನುಜ ರಸ್ತೆಯ 12ನೇ ಕ್ರಾಸ್‌ನಲ್ಲಿ ರಿಕ್ಷಾವನ್ನು ಅಡ್ಡಹಾಕಿದ ಯುವಕರ ತಂಡವೊಂದು ಅದರಲ್ಲಿದ್ದ ಪ್ರಯಾಣಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಮೈಸೂರು (ಜು.10): ಇಲ್ಲಿನ ರಾಮಾನುಜ ರಸ್ತೆಯ 12ನೇ ಕ್ರಾಸ್‌ನಲ್ಲಿ ರಿಕ್ಷಾವನ್ನು ಅಡ್ಡಹಾಕಿದ ಯುವಕರ ತಂಡವೊಂದು ಅದರಲ್ಲಿದ್ದ ಪ್ರಯಾಣಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗುರುವಾರ ರಾತ್ರಿ 9.18ರ ಸಮಯದಲ್ಲಿ ರಿಕ್ಷಾವೊಂದರಲ್ಲಿ ಕುಟುಂಬವೊಂದು ತೆರಳುತ್ತಿತ್ತು. ಅದನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ರಿಕ್ಷಾ ಅಡ್ಡಗಟ್ಟಿ, ಮಹಿಳೆಯನ್ನು ಹೊರಗೆ ಎಳೆದು ಹಾಕಲು ಯತ್ನಿಸಿ, ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೆಚ್ಚಿನ ಮಾಹಿತಿ ದೊರಕಿಲ್ಲ ಎಂದು ಪೊಲೀಸರು ತಿಳಿಸಿದರು.
ಘಟನೆಯ ಕುರಿತ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕಾರಿನಲ್ಲಿ ಬಂದ ನಾಲ್ವರು ಮಹಿಳೆಯನ್ನು ರಿಕ್ಷಾದಿಂದ ಎಳೆಯುವ ಹಾಗೂ ರಸ್ತೆಯಲ್ಲಿರುವ ಜನರು ಹತ್ತಿರ ಬಾರದಂತೆ ಕೈಯಲ್ಲಿ ಮಚ್ಚು ಹಿಡಿದು ಯುವಕನೊಬ್ಬ ವಾಹನವನ್ನು ತಡೆದಿರುವ ದೃಶ್ಯ ಸೆರೆಯಾಗಿದೆ. ಕೆ.ಆರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದನಗಾಯಿ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ: ದನಗಾಯಿ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಒತ್ತಾಯಿಸಿದ್ದಾರೆ. ತಾಲೂಕಿನ ಕೌದಳ್ಳಿ ಮಲೆ ಮಾದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ವ್ಯಾಪ್ತಿಯಲ್ಲಿ ಬರುವ ಕಡಂಬುರು ಗ್ರಾಮದ ರೈತ ಮಹದೇವ್ ತನ್ನ ಜಾನುವಾರು, ಮೇಕೆಗಳನ್ನು ಎಲಚಿ ಕೆರೆ ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿದ್ದಾಗ ಐವರು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ.
ಘಟನೆಯ ವಿವರ: ಎಲಚಿ ಕೆರೆ ಅರಣ್ಯ ಪ್ರದೇಶದಲ್ಲಿ ಕಡಂಬುರು ಗ್ರಾಮದ ರೈತ ಮಹದೇವ್ 2025 ಜೂ. 3 ರಂದು ಜಾನುವಾರುಗಳು ಮತ್ತು ತಮ್ಮ ಮೇಕೆಗಳನ್ನು ಮೇಯಲು ಬಿಟ್ಟಿದ್ದಾಗ ಬಂದ ಅರಣ್ಯಾಧಿಕಾರಿ ಹಾಗೂ ನಾಲ್ವರು ಸಿಬ್ಬಂದಿಗಳು ಜಾನುವಾರುಗಳನ್ನು ಹೊಡೆದು ಓಡಿಸಿ ನಂತರ ರೈತನ ಕಪಾಲಕ್ಕೆ ಬೆನ್ನಿಗೆ ಸಿಕ್ಕ ಕಡೆಯಲ್ಲ ಹಲ್ಲೇ ನಡಸಿ ಕೌದಳ್ಳಿ ಅರಣ್ಯ ಅಧಿಕಾರಿಗಳ ಗೆಸ್ಟ್ ಹೌಸ್ ನಲ್ಲಿ ಒಂದು ಕೊಠಡಿಯಲ್ಲಿ ಕೂಡಿಹಾಕಿ ಬಟ್ಟೆ ಬಿಚ್ಚಿ ಮನಬಂದಂತೆ ಹಲ್ಲೇ ನಡೆಸಿ ಈತನನ್ನು ಬಲವಂತವಾಗಿ ಚಿರತೆ ಸಾವಿಗೆ ಕಾರಣ ನಾನೇ ಎಂದು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ₹15 ಸಾವಿರ ನೀಡಿದರೆ ಬಿಡುತ್ತೇವೆ ಎಂದು ಒಂದು ದಿನ ಕೊಟ್ಟಡಿಯಲ್ಲಿ ಕೂಡಿಹಾಕಿ ನಂತರ ಬಿಡುಗಡೆಗೊಳಿಸಿದ್ದಾರೆ. ಈ ವಿಚಾರ ರೈತರಿಗೆ ತಿಳಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
