ಬೆಂಗಳೂರು(ಅ.09): ಡ್ರಗ್ಸ್‌ ದಂಧೆ ಕುರಿತ ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳ ಮುಂದೆ ದಿ.ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಪಂಚಭಾಷಾ ನಟಿಯೊಬ್ಬಳ ಸ್ನೇಹದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಈ ಪ್ರಕರಣದ ಸಂಬಂಧ ಬುಧವಾರ ರಿಕ್ಕಿಯನ್ನು ಸುದೀರ್ಘವಾಗಿ ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದರು. ಆಗ ತನ್ನ ಗೆಳೆಯ ಆದಿತ್ಯ ಆಳ್ವ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ತನಗೆ ನಟಿಯೊಬ್ಬಳ ಸ್ನೇಹವಾಗಿತ್ತು. ಆಕೆಗೆ ಪೆಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವ ಅನುಮಾನವಿದೆ ಎಂದು ರಿಕ್ಕಿ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಡ್ರಗ್ಸ್ ಮಾಫಿಯಾ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ಅರೆಸ್ಟ್

ಪಾರ್ಟಿಯಲ್ಲಿ ಸ್ನೇಹವಾದ ಬಳಿಕ ನಟಿ ಜತೆ ಆತ್ಮೀಯತೆ ಬೆಳೆಯಿತು. ಈ ಗೆಳೆತನದಲ್ಲೇ ಹಲವು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದೇವು. ಆದರೆ, ಆಕೆ ಡ್ರಗ್ಸ್‌ ಸೇವನೆ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದಿತ್ಯ ಆಳ್ವ ಮಾತ್ರವಲ್ಲದೆ ವೀರೇನ್‌ ಖನ್ನಾ ಸೇರಿದಂತೆ ಇತರರು ಸಂಘಟಿಸಿದ್ದ ಕೆಲವು ಪಾರ್ಟಿಗಳಿಗೆ ಸಹ ನಟಿ ಜತೆ ಹೋಗಿದ್ದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ನಟಿಯನ್ನು ಸಂಪರ್ಕಿಸಿಲ್ಲ ಎಂದು ರಿಕ್ಕಿ ಸ್ಪಷ್ಟಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ರಿಕ್ಕಿ ಹೇಳಿಕೆ ಆಧರಿಸಿ ಸಿಸಿಬಿ ಅಧಿಕಾರಿಗಳು, ಆ ಪಂಚಾಭಾಷಾ ತಾರೆ ಪತ್ತೆಗೆ ಮುಂದಾಗಿದ್ದಾರೆ. ರಿಕ್ಕಿ ಮೊಬೈಲ್‌ಗಳ ವಶಕ್ಕೆ ಪಡೆದಿರುವ ಅಧಿಕಾರಿಗಳು, ಆತನ ವಾಟ್ಸಾಪ್‌ ಚಾಟಿಂಗ್‌ ಪರಿಶೀಲಿಸಿದ್ದಾರೆ ಎಂದು ಹೇಳಲಾಗಿದೆ.

ಮತ್ತೊಬ್ಬ ಆಪ್ತನ ವಿಚಾರಣೆ

ಡ್ರಗ್ಸ್‌ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವಾನ ಮತ್ತೊಬ್ಬ ಸ್ನೇಹಿತನನ್ನು ಸಿಸಿಬಿ ಗುರುವಾರ ವಿಚಾರಣೆ ನಡೆಸಿದೆ. ಹಲಸೂರಿನ ಸಿವಿಲ್‌ ಗುತ್ತಿಗೆದಾರ ಲೋಕೇಶ್‌ಗೆ ತನಿಖೆಗೊಳಗಾಗಿದ್ದು, ಆದಿತ್ಯ ಆಳ್ವಾ ಜತೆ ಸ್ನೇಹದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಬುಧವಾರ ವಿಚಾರಣೆ ನಡೆಸಿದ ಬಳಿಕ ಮತ್ತೆ ಹಾಜರಾಗುವಂತೆ ಹೇಳಿದ್ದ ಅಧಿಕಾರಿಗಳೇ, ಗುರುವಾರ ಬೆಳಗ್ಗೆ ಕರೆ ಮಾಡಿ ವಿಚಾರಣೆ ಬರುವುದು ಬೇಡ ಎಂದು ರಿಕ್ಕಿಗೆ ಸೂಚಿಸಿದ್ದರು ಎನ್ನಲಾಗಿದೆ.