ಕೊಲೆ ಪ್ರಕರಣದ ಆರೋಪಿ ಪೊಲೀಸ್‌ ವ್ಯಾನ್‌ನಲ್ಲೇ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ತನಿಖೆಗೆ ಆದೇಶಿಸಲಾಗಿದೆ.  

ನವದೆಹಲಿ: ಮಹಾರಾಷ್ಟ್ರದ ಉಲ್ಹಾಸನಗರದಲ್ಲಿ ಕೊಲೆ ಪ್ರಕರಣದ ಆರೋಪಿಯೊಬ್ಬ ಪೊಲೀಸ್‌ ವ್ಯಾನ್‌ನಲ್ಲೇ ಹುಟ್ಟುಹಬ್ಬದ ಆಚರಣೆ ಮಾಡಿಕೊಂಡಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಪೊಲೀಸರ ನೈತಿಕತೆಯ ಬಗ್ಗೆ ಜನ ಪ್ರಶ್ನಿಸಲು ಆರಂಭಿಸಿದ್ದಾರೆ. ಪೊಲೀಸ್‌ ವ್ಯಾನ್‌ನಲ್ಲೇ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆದ ಬಳಿಕ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ರೋಶನ್‌ ಝಾ, ಹುಟ್ಟು ಹಬ್ಬ ಆಚರಿಸಿಕೊಂಡ ಕೊಲೆ ಪ್ರಕರಣದ ಆರೋಪಿ. ಆರೋಪಿ ಕೊಲೆ ಪ್ರಕರಣದ ಸಂಬಂಧ ಬಂಧನವಾಗಿದ್ದು ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಉಲ್ಹಾಸನಗರದ ನಿವಾಸಿಯಾಗಿರುವ ಝಾ ಒಬ್ಬ ಗ್ಯಾಂಗ್‌ಸ್ಟರ್‌. ಹಲವಾರು ಕೊಲೆ, ಕೊಲೆ ಯತ್ನ, ದರೋಡೆ ಮತ್ತಿತರ ಪ್ರಕರಣಗಳು ಝಾ ವಿರುದ್ಧ ಇದುವರೆಗೂ ದಾಖಲಾಗಿವೆ. ಇಂತಾ ನಟೋರಿಯಸ್‌ ಆರೋಪಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಪೊಲೀಸರು ಅನುವುಮಾಡಿಕೊಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಮೂಲ ಕಾರಣ. 

ಇದನ್ನೂ ಓದಿ: ನಿರುದ್ಯೋಗ: 11 ತಿಂಗಳ ಮಗುವನ್ನೇ ಕೊಂದು ಕಾಲುವೆಗೆ ಎಸೆದ ಅಪ್ಪ!

ಪ್ರಕರಣವೊಂದರ ವಿಚಾರಣೆ ಸಂಬಂಧ ಜೈಲಿನಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಾಗ ಕೇಕ್‌ ಕತ್ತಿರಿಸಿರುವ ಘಟನೆ ನಡೆದಿದೆ. ರೋಶನ್‌ ಝಾನ ಸಂಗಡಿಗರು ಈ ವೇಳೆ ಕೇಕ್‌ ತಂದಿದ್ದಾರೆ. ಪೊಲೀಸ್‌ ವ್ಯಾನ್‌ ಒಳಕ್ಕೇ ಕೇಕನ್ನು ಕೊಟ್ಟಿದ್ದಾರೆ. ಆತ ಅಲ್ಲಿಂದಲೇ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾನೆ.

ರೋಶನ್‌ ಝಾನ ಬೆಂಬಲಿಗರು ಕೇಕ್‌ ಕತ್ತರಿಸುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ನಂತರ ಅದನ್ನು ತಮ್ಮ ವಾಟ್ಸ್‌ಆಪ್‌ ಸ್ಟೇಟಸ್‌ಗೆ ಹಾಕಿದ್ದಾರೆ. ಸ್ಟೇಟಸ್ಸನ್ನು ನೋಡಿದ ಜನ ಅದರ ವಿಡಿಯೋ ಸ್ಕ್ರೀನ್‌ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಪೊಲೀಸರು ಕುಖ್ಯಾತ ಗ್ಯಾಂಗ್‌ಸ್ಟರ್‌ಗೆ ಕೇಕ್‌ ಕತ್ತರಿಸಲು ಹೇಗೆ ಬಿಟ್ಟರು ಎಂಬುದನ್ನು ಪ್ರಶ್ನಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ತಡೆಯಬೇಕಿತ್ತು. ಆದರೆ ಮೂಕ ಪ್ರೇಕ್ಷಕರಂತೆ ಸುಮ್ಮನೆ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಈ ಘಟನೆಯ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. 

ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

ಹಣವೊಂದಿದ್ದರೆ ಪೊಲೀಸ್‌ ಇಲಾಖೆಯನ್ನು ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂಬ ಆರೊಪಕ್ಕೆ ಈ ಬೆಳವಣಿಗೆ ಜ್ವಲಂತ ನಿದರ್ಶನವಾಗಿದೆ. ವ್ಯಕ್ತಿಯ ವಿರುದ್ಧ ಎಂತಾ ಗಂಭೀರ ಸ್ವರೂಪದ ಆರೋಪವಿದ್ದರೂ ಹಣವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದು ವ್ಯವಸ್ಥೆಯ ಅಣಕವಾಗಿದೆ.