ಬೆಂಗಳೂರು(ಏ.08): ಮನೆಯಲ್ಲಿ ನಡೆದಿದ್ದೆಲ್ಲವನ್ನು ತಂದೆಗೆ ಚಾಡಿ ಹೇಳುತ್ತಾಳೆ ಎಂದು ಕೋಪಗೊಂಡು ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿರುವ ಹೃದಯವಿದ್ರಾವಕ ಘಟನೆ ಅನ್ನಪೂಣೇಶ್ವರಿ ನಗರ ಸಮೀಪ ನಡೆದಿದೆ. ನಗರದ ಮಲ್ಲತ್ತಹಳ್ಳಿಯ ಈರಣ್ಣ ಮತ್ತು ಸುಧಾ ದಂಪತಿಯ ಪುತ್ರಿ ವಿನುತಾ (4) ಮೃತ ದುರ್ದೈವಿ. ಈ ಘಟನೆ ಸಂಬಂಧ ಮೃತಳ ತಾಯಿ ಸುಧಾಳನ್ನು ಪೊಲೀಸರು ಬಂಧಿಸಿದ್ದಾರೆ.

ಟಿವಿ ನೋಡುವ ವಿಚಾರಕ್ಕೆ ಗಲಾಟೆ:

ಚಿತ್ರದುರ್ಗ ಜಿಲ್ಲೆಯ ಈರಣ್ಣ ಮತ್ತು ಸುಧಾ ದಂಪತಿ, ಹೊಟ್ಟೆಪಾಡಿಗೆ ತವರೂರು ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಬಳಿಕ ಮಲ್ಲತ್ತಹಳ್ಳಿಯಲ್ಲಿ ದಂಪತಿ ನೆಲೆಸಿದ್ದರು. ಈರಣ್ಣ ಕೂಲಿಗೆ ದುಡಿದರೆ, ಮನೆ ಹತ್ತಿರದ ಎಸ್‌ಎಲ್‌ವಿ ಟೈಲ್ಸ್‌ ಅಂಗಡಿಯಲ್ಲಿ ಬೆಳಗ್ಗೆ 9ರಿಂದ 12ರವರೆಗೂ ಸುಧಾ ಕೆಲಸಕ್ಕೆ ಹೋಗುತ್ತಿದ್ದಳು. ಆ ವೇಳೆ ತನ್ನ ಮಗಳನ್ನು ಸಹ ಆಕೆ ಕರೆದುಕೊಂಡು ಹೋಗುತ್ತಿದ್ದಳು. ಪ್ರತಿ ದಿನ ಮುಂಜಾನೆ 6ಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಈರಣ್ಣ, ಮನೆಗೆ ಉಪಹಾರ ಮತ್ತು ಮಧ್ಯಾಹ್ನ ಊಟಕ್ಕೆ ಬಂದು ಹೋಗುತ್ತಿದ್ದ.

ಚೇಸಿಂಗ್.. ಖಾರದ ಪುಡಿ.. ಲಿಫ್ಟ್.. ಜತೆಗಿದ್ದವನೇ ಕೊಟ್ಟಿದ್ದ ಸುಳಿವು..!

ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಸುಧಾ ಟಿವಿ ನೋಡುತ್ತಾ ಕುಳಿತಿದ್ದಳು. ಆಗ ಮನೆಗೆ ಬಂದ ಈರಣ್ಣ, ಟಿವಿ ಚಾನಲ್‌ ಬದಲಾಯಿಸಿದ್ದ. ಕುಪಿತಗೊಂಡ ಸುಧಾ, ನೀನು ಟಿವಿ ಚಾನಲ್‌ ಬದಲಾಯಿಸಬೇಡ. ಯಾವಾಗಲೂ ನ್ಯೂಸ್‌ ಚಾಲನ್‌ ನೋಡಬೇಡ ಎಂದು ಸಿಡುಕಿದ್ದಳು. ತಾಯಿ ಮಾತಿಗೆ ಮುನಿದ ಮಗಳು, ಟಿವಿ ತಂದಿರುವುದು ಅಪ್ಪ. ಏನಾದರೂ ನೋಡಲಿ ಬಿಡು. ನೀನು ಹುಚ್ಚಿಯಂತೆ ಆಡಬೇಡ ಎಂದಿದ್ದಳು. ಪುತ್ರಿ ಮಾತಿಗೆ ಸಿಟ್ಟಿಗೆದ್ದ ಆಕೆ, ಪತಿ ಕೆಲಸಕ್ಕೆ ಹೋದ ಮೇಲೆ ಮಗಳನ್ನು ಕರೆದುಕೊಂಡು ಮಲ್ಲತ್ತಹಳ್ಳಿ ಸುತ್ತಮುತ್ತ ಓಡಾಡಿಸಿದ್ದಳು. ಕೊನೆಗೆ ನಾಗರಬಾವಿ ಹೊರವರ್ತುಲ ರಸ್ತೆ ದೀಪಾ ಕಾಂಪ್ಲೆಕ್ಸ್‌ ಹತ್ತಿರದ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ದುಪ್ಪಟ್ಟದಿಂದ ಕತ್ತು ಬಿಗಿದು ಹತ್ಯೆ ಮಾಡಿದ್ದಳು. ಇತ್ತ ಕೆಲಸ ಮುಗಿಸಿಕೊಂಡು ರಾತ್ರಿ 8ಕ್ಕೆ ಈರಣ್ಣ ಮರಳಿದಾಗ ಮನೆಗೆ ಬೀಗ ಹಾಕಿರುವುದು ಕಂಡು ಪತ್ನಿಗೆ ಕರೆ ಮಾಡಿದ್ದಾರೆ.

ಆಗ ಮಗಳಿಗೆ ಗೋಬಿ ಮಂಚೂರಿ ಕೊಡಿಸಲು ಕರೆದುಕೊಂಡು ಬಂದಿದ್ದೆ. ಆದರೆ ಗೋಬಿ ತಿಂದು ಹಣ ಕೊಡುವಷ್ಟರಲ್ಲಿ ಮಗಳು ಎಲ್ಲಿಯೋ ಕಾಣೆಯಾಗಿದ್ದಾಳೆ ಎಂದಿದ್ದಳು. ಇದರಿಂದ ಆತಂಕಗೊಂಡ ಈರಣ್ಣ, ತನ್ನ ಸ್ನೇಹಿತನನ್ನು ಕರೆದುಕೊಂಡು ಮಗಳಿಗೆ ಹುಡುಕಾಟ ನಡೆಸಿದ್ದರು. ಆದರೆ ಮತ್ತೆ ಪತ್ನಿಗೆ ಕರೆ ಮಾಡಿದಾಗ ಆಕೆ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ಬಳಿಕ ರಾತ್ರಿ 9ಕ್ಕೆ ಮತ್ತೆ ಕರೆ ಮಾಡಿದಾಗ ಸುಧಾ, ತಾನು ಮನೆಯಲ್ಲಿದ್ದೇನೆ ಎಂದಿದ್ದಳು. ಮನೆಗೆ ಬಂದ ಈರಣ್ಣ, ಮಗಳ ಬಗ್ಗೆ ವಿಚಾರಿಸಿದಾಗೂ ಆರೋಪಿ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು ಜ್ಞಾನಭಾರತಿ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.

ನಿರ್ಮಾಣ ಹಂತದ ಕಟ್ಟಡದ ಆವರಣದಲ್ಲಿ ಬುಧವಾರ ಬೆಳಗ್ಗೆ ಅಪರಿಚಿತ ಬಾಲಕಿ ಮೃತದೇಹ ನೋಡಿದ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿದ ಪರಿಶೀಲಿಸಿದ ಅನ್ನಪೂಣೇಶ್ವರಿ ನಗರ ಪೊಲೀಸರು, ಮೃತದೇಹ ಪತ್ತೆಯಾಗಿರುವ ಕುರಿತು ಎಲ್ಲ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಈರಣ್ಣ ದಂಪತಿಗೆ ಕರೆ ಮಾಡಿ ಪೊಲೀಸರು, ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆಗ ಮೃತದೇಹದ ಗುರುತು ಪತ್ತೆ ಹಚ್ಚಿ ಈರಣ್ಣ ಗೋಳಾಡಿದ್ದಾನೆ.

ಮಂಡ್ಯ;  ಮೊಮ್ಮಗಳಿಗೆ ಬಂದ ಅದೊಂದು ಅನುಮಾನ, ತಾತನನ್ನೇ ಕೊಂದಿದ್ದ ಮೊಮ್ಮಗ!

ಗೋಬಿ ಕತೆ ಬಿಚ್ಚಿಟ್ಟ ಸತ್ಯ

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸುಧಾಳನ್ನು ಮಗಳ ಕುರಿತು ವಿಚಾರಿಸಿದಾಗ ಗೋಬಿ ಮಂಚೂರಿ ತಿನ್ನಲು ಹೋದ ಕತೆಯನ್ನೇ ಹೇಳಿದ್ದಾಳೆ. ಆದರೆ ಆಕೆಯ ವರ್ತನೆ ಬಗ್ಗೆ ಶಂಕೆಗೊಂಡ ಪೊಲೀಸರು, ಆಕೆಯನ್ನು ತೀವ್ರವಾಗಿ ಪ್ರಶ್ನಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

ಮಗಳು ನನಗಿಂತ ತಂದೆಯನ್ನೇ ಹೆಚ್ಚು ಹಚ್ಚಿಕೊಂಡಿದ್ದಳು. ನಾನು ಏನು ಕೆಲಸ ಮಾಡಿದರೂ, ಯಾರ ಜತೆ ಮಾತನಾಡಿದರೂ ಯಾರನ್ನು ಭೇಟಿ ಮಾಡಿದೆ ಎನ್ನುವ ಪ್ರತಿಯೊಂದು ಮಾಹಿತಿಯನ್ನು ತಂದೆಗೆ ವರದಿ ಒಪ್ಪಿಸುತ್ತಿದ್ದಳು. ಈ ನಡವಳಿಕೆಯಿಂದ ಕೋಪಗೊಂಡು ಹತ್ಯೆ ಮಾಡಿದೆ ಎಂದು ಆಕೆ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.