ಬೆಂಗಳೂರು(ಡಿ.13):  ಹಸುಗೂಸಿನ ಮೇಲೆ ಹಲ್ಲೆ ನಡೆಸುತ್ತಿದ್ದರಿಂದ ಕೋಪಗೊಂಡ ತಾಯಿ ಆರು ವರ್ಷದ ಪುತ್ರನ ಕತ್ತು ಹಿಸುಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಪಟ್ಟಣಗೆರೆ ನಿವಾಸಿ ತೇಜ್‌ರಾಮ್‌ ಮತ್ತು ದೇವಿ ಅವರ ಪುತ್ರ ಮನೀಶ್‌ (6) ಮೃತ ಬಾಲಕ. ಈ ಸಂಬಂಧ ಪತಿ ಕೊಟ್ಟದೂರಿನ ಮೇರೆಗೆ ಮಗುವಿನ ತಾಯಿ ದೇವಿಯನ್ನು (26) ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.

ದಂಪತಿ ಮೂಲತಃ ರಾಜಸ್ಥಾನ ರಾಜ್ಯದವರಾಗಿದ್ದಾರೆ. ತೇಜರಾಮ್‌ ಎಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಪಟ್ಟಣಗೆರೆಯಲ್ಲಿ ಪ್ರಾವಿಷನ್‌ ಸ್ಟೋರ್‌ ಹೊಂದಿದ್ದಾರೆ. ಏಳು ವರ್ಷಗಳ ಹಿಂದೆ ತೇಜ್‌ರಾಮ್‌ ದೇವಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮನೀಶ್‌ ಹಾಗೂ ಎರಡು ತಿಂಗಳ ಮಗು ಇದೆ. ದಂಪತಿ ಪಟ್ಟಣರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಹೆಂಡತಿಗೆ ಪ್ರಪೋಸ್‌ ಮಾಡಿದ್ದವನ ಕೊಂದು ಮೂಟೆ ಕಟ್ಟಿದರು..!

ಶನಿವಾರ ತೇಜ್‌ರಾಮ್‌ ಎಂದಿನಂತೆ ಅಂಗಡಿಗೆ ಹೋಗಿದ್ದರು. ಮಧ್ಯಾಹ್ನ 12.45ರ ಸುಮಾರಿಗೆ ಪತಿ ಕರೆ ಮಾಡಿದ್ದ ಪತ್ನಿ, ಪುತ್ರ ಮನೀಶ್‌ ಅಸ್ವಸ್ಥಗೊಂಡಿದ್ದು, ಕೂಡಲೇ ಮನೆಗೆ ಬರುವಂತೆ ಹೇಳಿದ್ದಳು. ತೇಜ್‌ರಾಮ್‌ ಮನೆಗೆ ಹೋದಾಗ ಮನೀಶ್‌ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. ಪತ್ನಿಯನ್ನು ಪತಿ ಪ್ರಶ್ನೆ ಮಾಡಿದಾಗ, ಮಗುವಿಗೆ ಮನೀಶ್‌ ಹೊಡೆಯುತ್ತಿದ್ದ. ಸುಮ್ಮನಿರುವಂತೆ ಎಷ್ಟುಹೇಳಿದರೂ ಆತ ಸುಮ್ಮನಾಗಿರಲಿಲ್ಲ. ಕೋಪಗೊಂಡು ಆತನ ಮೇಲೆ ಹಲ್ಲೆ ನಡೆಸಿ, ದಿಂಬಿನಿಂದ ಮುಖ ಉಸಿರುಗಟ್ಟಿಸಿದ್ದೆ. ಬಳಿಕ ವೇಲಿನಿಂದ ಕತ್ತು ಹಿಸುಕಿದೆ ಎಂದು ಹೇಳಿದ್ದಾಳೆ. ಕೂಡಲೇ ತೇಜ್‌ರಾಮ್‌ ಸಂಬಂಧಿಯೊಬ್ಬರ ನೆರವಿನಿಂದ ಮಗನನ್ನು ಬಿಜಿಎಸ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗುವನ್ನು ಪರಿಶೀಲಿಸಿದ ವೈದ್ಯರು ಮೊದಲೇ ಮಗು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.

ಪತಿ ತೇಜ್‌ರಾಮ್‌ ಕೊಟ್ಟ ದೂರಿನ ಮೇರೆಗೆ ಪತ್ನಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ವಿವರಿಸಿದರು. ತಾಯಿ ಈ ಹಿಂದೆ ಪುತ್ರನ ಮೇಲೆ ಹಲ್ಲೆ ನಡೆಸಿದ್ದು, ಮಾನಸಿಕ ಖಿನ್ನತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಕೊಡಿಸಲಾಗಿತ್ತು. ದಂಪತಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿ ವಾಸವಿದ್ದರು. ಕೋಪದಲ್ಲಿ ಕೃತ್ಯ ಎಸಗಿರುವ ಮಹಿಳೆ ವಿಚಾರಣೆ ವೇಳೆ ಕಣ್ಣಿರಿಡುತ್ತಿದ್ದಾರೆ. ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು, ಮಹಿಳೆ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ, ಕೋಪದಲ್ಲಿ ಕತ್ತು ಹಿಸುಕಿರುವುದಾಗಿ ಹೇಳಿಕೆ ನೀಡಿದ್ದಾಗಿ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮಾತು ಕೇಳದ್ದಕ್ಕೆ ಮಹಿಳೆ ಕೋಪಗೊಂಡು ಪುತ್ರನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಮಹಿಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ದಂಪತಿ ಮೂಲತಃ ರಾಜಸ್ಥಾನದವರಾಗಿದ್ದು, ಏಳೆಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.