ಬೆಂಗಳೂರು(ಡಿ.11): ವಿವಾಹಿತ ಮಹಿಳೆಗೆ ಪ್ರೇಮ ನಿವೇದನೆ ಮಾಡಿದ್ದ ಯುವಕನಿಗೆ ಕಂಠಮಟ ಮದ್ಯ ಕುಡಿಸಿ ಆಕೆಯ ಪತಿ ಮತ್ತು ಸ್ನೇಹಿತರು ಹತ್ಯೆಗೈದಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನ್ಯೂ ತಿಪ್ಪಸಂದ್ರದ ನಿವಾಸಿ ರಾಜದೊರೈ (25) ಕೊಲೆಯಾದ ವ್ಯಕ್ತಿ. ಈ ಹತ್ಯೆ ಪ್ರಕರಣ ಸಂಬಂಧ ಸಂತ್ರಸ್ತೆಯ ಪತಿ ಬಾಲಾಜಿ ಹಾಗೂ ಆರ್ಮುಗಂ ಸೇರಿದಂತೆ ಆರು ಮಂದಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಾಜಿ ಪತ್ನಿಗೆ ರಾಜದೊರೈ ಮದುವೆ ಆಗುವಂತೆ ಕಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಬಾಲಾಜಿ, ಮಾತುಕತೆ ನೆಪದಲ್ಲಿ ರಾಜದೊರೈನನ್ನು ಕರೆದೊಯ್ದು ಹತ್ಯೆಗೈದಿದ್ದ. ಮೃತನ ನಾಪತ್ತೆ ಬಗ್ಗೆ ಆತನ ಕುಟುಂಬದವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಪ್ರೇಮಕ್ಕೆ ಬಲಿಯಾದ ಯುವಕ:

ಎರಡು ವರ್ಷಗಳ ಹಿಂದೆ ಶೋಭ (ಹೆಸರು ಬದಲಾಯಿಸಲಾಗಿದೆ) ಜತೆ ಬಾಲಾಜಿ ವಿವಾಹವಾಗಿದ್ದು, ಲಿಂಗರಾಜಪುರದಲ್ಲಿ ದಂಪತಿ ನೆಲೆಸಿದ್ದರು. ಚಾಕೋಲೆಟ್‌ ಪೂರೈಕೆ ವಾಹನದ ಚಾಲಕನಾಗಿ ಬಾಲಾಜಿ ಕೆಲಸ ಮಾಡುತ್ತಿದ್ದರೆ, ಜೆ.ಬಿ.ನಗರದಲ್ಲಿ ತರಕಾರಿ ಅಂಗಡಿಯಲ್ಲಿ ಆತನ ಪತ್ನಿ ಕೆಲಸ ಮಾಡುತ್ತಿದ್ದಳು. ಅದೇ ಮಳಿಗೆಯಲ್ಲಿ ರಾಜದೊರೈ ಸಹ ಕೆಲಸಕ್ಕಿದ್ದ. ಕೆಲ ದಿನಗಳಿಂದ ಬಾಲಾಜಿ ಪತ್ನಿ ಹಿಂದೆ ಬಿದ್ದಿದ್ದ ಆತ, ‘ನಾನು ನಿನ್ನ ಪ್ರೀತಿಸುತ್ತೇನೆ. ನನ್ನ ಮದುವೆ ಮಾಡಿಕೋ’ ಎಂದು ಪ್ರೇಮ ನಿವೇದನೆ ಮಾಡಿದ್ದ ಎನ್ನಲಾಗಿದೆ.

ಅಕ್ರಮ ಸಂಬಂಧವನ್ನು ಅತ್ತೆ ಕಣ್ಣಾರೆ ಕಂಡಳು : ಕತ್ತು ಹಿಸುಕಿ ಕೊಂದಳು ಸೊಸೆ

ಈ ಪ್ರಸ್ತಾಪಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಳು. ಆದರೂ ಬಿಡದೆ ಆಕೆಯನ್ನು ಕಾಡಲಾರಂಭಿಸಿದ್ದ. ಇದರಿಂದ ಬೇಸತ್ತ ಶೋಭಾ, ಕೊನೆಗೆ ತನ್ನ ಪತಿ ಬಳಿ ಈ ವಿಷಯ ಹೇಳಿಕೊಂಡಿದ್ದಳು. ಇದರಿಂದ ಕೋಪಗೊಂಡ ಬಾಲಾಜಿ, ರಾಜದೊರೈಗೆ ತನ್ನ ಪತ್ನಿ ಸಹವಾಸಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದ. ಇದಾದ ಬಳಿಕವೂ ರಾಜದೊರೈ ವರಸೆ ಬದಲಾಗಲಿಲ್ಲ. ಇದರಿಂದ ಮತ್ತಷ್ಟುವ್ಯಗ್ರನಾದ ಬಾಲಾಜಿ, ರಾಜದೊರೈ ಕೊಲೆಗೆ ನಿರ್ಧರಿಸಿದ್ದಾನೆ. ಆಗ ಆತನಿಗೆ ಆರ್ಮುಗಂ ಸೇರಿದಂತೆ ಇತರೆ ಆರೋಪಿಗಳು ಸಾಥ್‌ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೊಂದು ಮೂಟೆ ಕಟ್ಟಿದ್ರು:

ಪೂರ್ವನಿಯೋಜಿತ ಸಂಚಿನಂತೆ ನ.29 ರಂದು ಲಿಂಗರಾಜಪುರದ ಮನೆಯೊಂದಕ್ಕೆ ಮದ್ಯ ಸೇವನೆ ನೆಪದಲ್ಲಿ ರಾಜದೊರೈನನ್ನು ಆರೋಪಿಗಳು ಕರೆಸಿದ್ದರು. ಬಳಿಕ ಕಂಠಮಟ ಮದ್ಯಪಾನ ಮಾಡಿಸಿದ ಬಳಿಕ ಆತನ ಮೇಲೆ ಬಾಲಾಜಿ ಗ್ಯಾಂಗ್‌ ಹಲ್ಲೆ ನಡೆಸಿ ಕೊಂದಿದೆ. ಮರುದಿನ ಮೃತದೇಹವನ್ನು ಮೂಟೆಕಟ್ಟಿರಾಮಮೂರ್ತಿ ನಗರದ ಸರ್ವಿಸ್‌ ರಸ್ತೆಯಲ್ಲಿ ಬಿಸಾಡಿದ್ದ ಆರೋಪಿಗಳು, ತಮಿಳುನಾಡಿಗೆ ಪರಾರಿಯಾಗಿದ್ದರು. ಇತ್ತ ಮನೆಯಿಂದ ಹೊರ ಹೋದ ಮಗ ಮರಳದೆ ಹೋದಾಗ ಕಂಗಲಾದ ಮೃತನ ಕುಟುಂಬದವರು, ಜೆ.ಬಿ.ನಗರ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದರು.

ಆಗ ಪೊಲೀಸರು ತನಿಖೆ ನಡೆಸಿದಾಗ ನ.29ರಂದು ಸಂಜೆ ತನ್ನ ಆಟೋದಲ್ಲಿ ಬಾಲಾಜಿ, ರಾಜದೊರೈನನ್ನು ಲಿಂಗರಾಜಪುರಕ್ಕೆ ಕರೆದೊಯ್ದ ಸಂಗತಿ ಗೊತ್ತಾಯಿತು. ಈ ವಿಷಯವನ್ನು ಬಾಣಸವಾಡಿ ಠಾಣೆ ಪೊಲೀಸರಿಗೆ ಜೆ.ಬಿ.ನಗರ ಪೊಲೀಸರು ತಿಳಿಸಿದ್ದರು. ಅಂತೆಯೇ ತನಿಖೆ ಕೈಗೆತ್ತಿಕೊಂಡ ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ನೇತೃತ್ವದ ತಂಡವು, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಬಾಲಾಜಿಯನ್ನು ಬಂಧಿಸಿ ಕರೆ ತಂದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.