Asianet Suvarna News Asianet Suvarna News

ಲವ್‌ ಜಿಹಾದ್‌ ಆರೋಪಿಗೆ ಹುಬ್ಬಳ್ಳಿ ಪೊಲೀಸರಿಂದ ಗುಂಡೇಟು!

ಹಿಂದು ಬಾಲಕಿ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಲು ಕಾರಣನಾದ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

Love Jihad accused shot by Hubballi police gvd
Author
First Published May 5, 2024, 4:49 AM IST

ಧಾರವಾಡ (ಮೇ.05): ಹಿಂದು ಬಾಲಕಿ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಲು ಕಾರಣನಾದ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದು, ಗಾಯಗೊಂಡ ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

ಸದ್ದಾಂ ಹುಸೇನ್‌ ಎಂಬಾತ ಆರೋಪಿ. ಆರೋಪಿಯಿಂದ ಹಲ್ಲೆಗೊಳಗಾದ ಪಿಐ ಸಂಗಮೇಶ ಹಾಗೂ ಪೊಲೀಸ್‌ ಪೇದೆ ಅರುಣ ಗಾಯಗೊಂಡಿದ್ದು, ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಇನ್ನೂ ಜನಮಾನಸದಲ್ಲಿ ಉಳಿದಿರುವಾಗಲೇ ನವನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಸದ್ದಾಂ ಹುಸೇನ್‌ ಎಂಬಾತ ನಂಬಿಸಿ ಗರ್ಭಿಣಿ ಮಾಡಿದ್ದಾನೆ ಎಂದು ದೂರು ದಾಖಲಾಗಿತ್ತು. ಬೇರೆಯವರ ಮುಂದೆ ಹೇಳಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದ. 

ಬಾಲಕಿಗೆ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಆಕೆಯನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆಗ ವೈದ್ಯಕೀಯ ಪರೀಕ್ಷೆಯಿಂದ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದರು. ಬಳಿಕ, ಆತನ ಮೇಲೆ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ ಆತನನ್ನು ಬಂಧಿಸಿ ಕರೆತರುವಾಗ ಸುತಗಟ್ಟಿ ಗ್ರಾಮದ ಬಳಿ ತನ್ನ ಬಳಿಯಿದ್ದ ಪೆನ್‌ ನೈಫ್‌ (ಚಿಕ್ಕ ಚಾಕು)ನಿಂದ ಪೇದೆ ಅರುಣ ಅವರ ಮೇಲೆಯೇ ಆತ ಹಲ್ಲೆ ನಡೆಸಿದ. ಪೇದೆ ರಕ್ಷಣೆಗೆ ತೆರಳಿದ ಪಿಐ ಸಂಗಮೇಶ ಅವರ ಮೇಲೂ ಹಲ್ಲೆ ನಡೆಸಲು ಮುಂದಾದ. 

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌, ರೇಪ್‌ ಆರೋಪ

ಕೂಡಲೇ ಎಚ್ಚೆತ್ತ ಪೊಲೀಸರು, ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಹೆದರದ ಆತ ಪಿಐ ಸಂಗಮೇಶ ಅವರ ಭುಜ, ಬೆನ್ನಿಗೆ ಪೆನ್‌ ನೈಫ್‌ನಿಂದ ಇರಿದ. ಆಗ ಅನಿವಾರ್ಯವಾಗಿ ಈತನ ಎಡಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತನ ಕೈಯಲ್ಲಿದ್ದ ಪೆನ್‌ನೈಫ್‌ ಕಸಿದುಕೊಂಡಿದ್ದಾರೆ ಗಾಯಗೊಂಡ ಸದ್ದಾಂ ಹುಸೇನ್‌ನನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಪಿಐ ಸಂಗಮೇಶ ಹಾಗೂ ಪೇದೆ ಅರುಣ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios