ಹೊಳೆಹೊನ್ನೂರು(ಡಿ.25):ಕಳೆದ ಆರೇಳು ದಿನಗಳಿಂದ ಕಾಣೆಯಾಗಿದ್ದ ಮಲ್ಲಾಪುರದ ಗ್ರಾಮದ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಗ್ರಾಮದ ಕೆರೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.

ಮನೆಯಲ್ಲಿ ನಡೆದ ಕೌಟುಂಬಿಕ ಕಲಹದಿಂದಾಗಿ ಮನನೊಂದ ಮಹಿಳೆ ಮಲ್ಲಾಪುರ ಗ್ರಾಮದ ಮಂಜಮ್ಮ(30), ಅವರ ಮಕ್ಕಳಾದ ಯಮುನಾ(6) ರಚನಾ(3) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸೆಂಬರ್‌ 18ರಂದು ಮಂಜುಮ್ಮ ತನ್ನ ಮಕ್ಕಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಡಿಸೆಂಬರ್‌ 21ರಂದು ಆಕೆಯ ಮನೆಯವರು ಹೊಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಗುರುವಾರ ಬೆಳಿಗ್ಗೆ ಮಲ್ಲಾಪುರ ಕೆರೆಯಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಾಲಕ್ಕೆ ಹೆದರಿ ಇಬ್ಬರು ಮಕ್ಕಳ ಕೆರೆ​ಗೆ ಎಸೆದ ದಂಪತಿ: ಸಾಯಲು ಅಂಜಿ ಬದು​ಕು​ಳಿದ ತಂದೆ-ತಾಯಿ

ಪೊಲೀಸರು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದಾಗ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್‌ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ತಾಯಿ ಮಕ್ಕಳ ಆತ್ಮಹತ್ಯೆಗೆ ನಿಖರ ಕಾರಣವೇನು ಎನ್ನುವುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.