ಮೊಬೈಲ್ ಅಂಗಡಿಗೆ ವಿವಿಧ ವ್ಯಕ್ತಿಗಳಿಂದ ಹಣ ಬರುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅದು ಮುಂಬೈ ಮೂಲಕ ವಿದೇಶಕ್ಕೆ ವರ್ಗಾವಣೆಯಾಗುತ್ತಿತ್ತು. 

ಹೈದರಾಬಾದ್ (ಜೂ.9): ಅಂತರರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಮಾರಾಟ ಜಾಲದಲ್ಲಿ ಕೆಲಸ ಮಾಡುತ್ತಿದ್ದ ಗ್ಯಾಂಗ್‌ನ ಸದಸ್ಯರನ್ನು ಗೋವಾದಿಂದ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಒಬ್ಬ ವ್ಯಕ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ವಾಷಿಂಗ್ ಮೆಷಿನ್ ಒಳಗೆ ಇಟ್ಟಿದ್ದ 50 ಲಕ್ಷ ರೂಪಾಯಿ ಪತ್ತೆಯಾಗಿದೆ. ತೆಲಂಗಾಣ ಆಂಟಿ ನಾರ್ಕೋಟಿಕ್ಸ್ ಬ್ಯೂರೋ ಈ ಹಿಂದೆ ಬಂಧಿಸಿದ್ದ ವ್ಯಕ್ತಿಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಈ ತನಿಖೆ ನಡೆಸಲಾಗಿತ್ತು.

ತಿಂಗಳಿಂದ ಗ್ಯಾಂಗ್ ಬೆನ್ನತ್ತಿದ್ದ ಪೊಲೀಸರು:

ಒಂದು ತಿಂಗಳಿನಿಂದ ಡ್ರಗ್ಸ್ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ಗಮನಿಸುತ್ತಿದ್ದರು. ಕೊನೆಗೂ ಗೋವಾದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಉತ್ತರಂ ಸಿಂಗ್ ಎಂಬಾತನನ್ನು ಗೋವಾ ಪೊಲೀಸರ ಸಹಾಯದಿಂದ ತೆಲಂಗಾಣ ಡ್ರಗ್ಸ್ ವಿರೋಧಿ ದಳ ಬಂಧಿಸಿದೆ. ಒಂದೇ ವಾರದಲ್ಲಿ ಈತನಿಗೆ 2.10 ಕೋಟಿ ರೂಪಾಯಿ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ಪ್ರಜೆಗಳು ಸೇರಿದಂತೆ ಹಲವರು ಈ ಹಣವನ್ನು ನೀಡಿದ್ದರು. ಮೊದಲು ಮುಂಬೈಗೆ ವರ್ಗಾಯಿಸಲಾದ ಹಣವನ್ನು ನಂತರ ನೈಜೀರಿಯಾಕ್ಕೆ ಕಳುಹಿಸಲಾಗುತ್ತಿತ್ತು. ಡ್ರಗ್ಸ್ ಮಾರಾಟದ ಹಣವನ್ನು ಮೊಬೈಲ್ ಅಂಗಡಿಗೆ ತರಲಾಗುತ್ತಿತ್ತು ಎಂದು ಕಂಡುಬಂದಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ 50 ಲಕ್ಷ ರೂಪಾಯಿ ಡ್ರಗ್ಸ್ ಮಾರಾಟದ ಎರಡು ದಿನಗಳ ಕಲೆಕ್ಷನ್ ಮಾತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಇದನ್ನು ವರ್ಗಾಯಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಮೇ 26 ರಿಂದ ಜೂನ್ 1 ರವರೆಗಿನ ಅವಧಿಯಲ್ಲಿ 58 ಹವಾಲಾ ವ್ಯವಹಾರಗಳ ಮೂಲಕ 2.10 ಕೋಟಿ ರೂಪಾಯಿ ಈತನಿಗೆ ಬಂದಿತ್ತು ಎಂದು ದೃಢಪಡಿಸಲಾಗಿದೆ.

ಬಾಯ್ಬಿಟ್ಟ ನೈಜೀರಿಯನ್ಸ್:

ತೆಲಂಗಾಣ ಪೊಲೀಸರು ಈ ಹಿಂದೆ ಬಂಧಿಸಿದ್ದ ಇಬ್ಬರು ನೈಜೀರಿಯನ್ನರನ್ನು ಹಿಂಬಾಲಿಸಿ ತನಿಖೆ ಗೋವಾಗೆ ತಲುಪಿತ್ತು. ವಿದೇಶದಿಂದ ಡ್ರಗ್ಸ್ ತರಿಸಿ ಹಣ ಪಡೆದು ವಿದೇಶಕ್ಕೆ ಕಳುಹಿಸುವ ಹಲವು ಏಜೆಂಟ್‌ಗಳಲ್ಲಿ ಈತ ಒಬ್ಬ ಮಾತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.