ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ: ಸಿಕ್ಕಿಬಿದ್ದ ಆರೋಪಿಗಳು
* ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿಯಿಟ್ಟ ಪ್ರಕರಣ
* ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
* ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿಸ್ಟರಿ ಇಲ್ಲ
ಬೆಂಗಳೂರು, (ಆ.13): ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು (ಆ.13) ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಶ್ರೀಧರ್ ಗೌಡ ಮತ್ತು ನವೀನ್ ಕಾಳಪ್ಪ ಹಾಗೂ ಕೇರಳ ಮೂಲದ ಸಾಗರ್ ಥಾಪ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ ಕೆಎ 51, ಎಲ್ 4411 ಬಜಾಜ್ ಪ್ಲ್ಯಾಟಿನಾ ಬೈಕ್ ವಶಪಡಿಸಿಕೊಂಡಿದ್ದಾರೆ.
ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಟ್ವಿಸ್ಟ್..ಬಟ್ಟೆ ಬದಲಿಸಿದ್ದು ಯಾಕೆ?
ಶ್ರೀಮಂತರು ಶ್ರೀಮಂತರಾಗೇ ಇರ್ತಾರೆ, ಬಡವರು ಬಡವರಾಗೇ ಇರ್ತಾರೆ. ಆ ಕೋಪಕ್ಕೆ ಬೆಂಕಿ ಇಟ್ವಿ ಎಂದ ಆರೋಪಿಗಳು ತನಿಖೆ ವೇಳೆ ಹೇಳಿದ್ದಾರೆ. ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಿದ್ದರು. ದೊಡ್ಡವರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಸತೀಶ್ ರೆಡ್ಡಿ ಮನೆ ಆವರಣಕ್ಕೆ ನುಗ್ಗಿ ಕಾರಿಗೆ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮೂವರು ಬಡವರಾಗಿದ್ದು, ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳನ್ನು ತಿರುಗುವುದನ್ನ ನೋಡಿ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ದೊಡ್ಡವರಿಗೆ ಬುದ್ದಿ ಕಳಿಸಬೇಕು ಎಂಬ ಕಾರಣಕ್ಕೆ ಕಾರಿಗೆ ಬೆಂಕಿ ಇಟ್ಟಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಆದ್ರೆ, ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿಸ್ಟರಿ ಇಲ್ಲ ಎನ್ನುವುದು ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.