Koppal News: ಚೆಳ್ಳೂರು ಶಾಲೆ ಕಾಂಪೌಂಡ್ ಕೆಡವಿದ ಕುರಿತು ವಿವಾದ?
ತಾಲೂಕಿನ ಚೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯನ್ನು ದುಷ್ಕರ್ಮಿಗಳು ಇತ್ತೀಚಿಗೆ ಒಡೆದು ಹಾಕಿದ್ದು, ಈ ಕುರಿತು ದೂರು ದಾಖಲಾಗಿದ್ದು, ಅದು ಹೊಸ ವಿವಾದಕ್ಕೆ ಕಾರಣವಾಗಿದೆ.
ಕಾರಟಗಿ (ಫೆ.7) : ತಾಲೂಕಿನ ಚೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯನ್ನು ದುಷ್ಕರ್ಮಿಗಳು ಇತ್ತೀಚಿಗೆ ಒಡೆದು ಹಾಕಿದ್ದು, ಈ ಕುರಿತು ದೂರು ದಾಖಲಾಗಿದ್ದು, ಅದು ಹೊಸ ವಿವಾದಕ್ಕೆ ಕಾರಣವಾಗಿದೆ.
ಶಾಲೆ ಮುಖ್ಯ ಗುರು ಮೊಹ್ಮದ್ ರಫಿ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೆ. 1ರಂದು ಬೆಳಗ್ಗೆ 9 ಗಂಟೆಗೆ ಬಂದಾಗ ಶಾಲೆಯ ತರಗತಿ ಕೊಠಡಿ ಎದುರಿನ ಕಾಂಪೌಂಡ್ ಅನ್ನು ಕಿಡಿಗೇಡಿಗಳು ಒಡೆದು ನಷ್ಟಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮುಖ್ಯಗುರುಗಳ ಈ ದೂರನ್ನು ಪರಿಗಣಿಸಿದ ಕಾರಟಗಿ ಪೊಲೀಸರು ಐಪಿಸಿ 427 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೇ ಹಲವರನ್ನು ವಿಚಾರಣೆ ಸಹ ಮಾಡಿದ್ದಾರೆ.
ಕೊಪ್ಪಳ: ಸಮವಸ್ತ್ರ ಬಟ್ಟೆಮರಳಿಸುತ್ತಿರುವ ವಿದ್ಯಾರ್ಥಿಗಳು!
ಹೋರಾಟಗಾರರ ವಿಚಾರಣೆ:
ಈ ಹಿಂದೆ ಶಾಲೆಯ ಜಾಗದ ಉಳಿವಿಗಾಗಿ ಹೋರಾಟ ನಡೆಸಿದ ಹಲವು ಸದಸ್ಯರನ್ನು ಸಹ ವಿಚಾರಣೆಗೆ ಕರೆದಿದ್ದು ವಿವಾದಕ್ಕೆ ಕಾರಣವಾಗಿದೆ. ಶಾಲೆಯ ಜಾಗ ಕೈತಪ್ಪಿ ಹೋಗುತ್ತಿದ್ದ ಸಂದರ್ಭದಲ್ಲಿ ಅದನ್ನು ಉಳಿಸಲು ಹೋರಾಟ ಮಾಡಿದ್ದವರನ್ನು ಈ ಘಟನೆಯಲ್ಲಿ ಸಿಲುಕಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಕಳೆದ ವರ್ಷ ಮುಖ್ಯ ಗುರುಗಳು ಬಿಇಒ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದು ಸರ್ವೆ ನಂ.140 ರಲ್ಲಿ ಶಾಲೆಯ 32 ಗುಂಟೆ ಜಾಗದಲ್ಲಿ ಪೂರ್ವ ದಿಕ್ಕಿನಲ್ಲಿ 6 ಗುಂಟೆ ಜಾಗವನ್ನು 2010- 11ನೇ ಸಾಲಿನಲ್ಲಿ ಭೂದಾನಿಗಳು ತಮ್ಮ ವಶಕ್ಕೆ ಪಡೆದು ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದು ವರದಿ ಸಲ್ಲಿಸಿದ್ದರು.
ಈ ವರದಿ ಹಿನ್ನೆಲೆಯಲ್ಲಿ 2021ರ ಏ. 5ರಂದು ಇಡೀ ಗ್ರಾಮಸ್ಥರು ಅತಿಕ್ರಮಣ ಮಾಡಿದವರ ವಿರುದ್ಧ ಒಕ್ಕೊರಲಿನಿಂದ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ತಹಸೀಲ್ದಾರ್, ಕಾರಟಗಿ ಪೊಲೀಸರು ತೆರಳಿ ಅತಿಕ್ರಮಣ ತೆರವು ಮಾಡುವುದಾಗಿ ಮತ್ತು ಸರ್ಕಾರಿ ಶಾಲೆಗೆ ನಿಗದಿತ ಜಾಗ ನಿಗದಿ ಪಡಿಸುವುದಾಗಿ ಭರವಸೆ ನೀಡಿದ್ದರು.
Education: ಖಾಸಗಿ ಶಾಲೆಗಳಿಂದ ಪಾಲಕರಿಗೆ ಶುಲ್ಕದ ಬರೆ!
ಅದಾದ ಬಳಿಕ ಈ ಶಾಲೆಯ ಖಾಲಿ ಜಾಗದ ಉಳಿವಿಗಾಗಿ, ಅತಿಕ್ರಮಣ ತಪ್ಪಿಸಲು ಶಾಲೆ ಹಳೆ ವಿದ್ಯಾರ್ಥಿಗಳು, ಗ್ರಾಮದ ಯುವ ಸಮೂಹ ಮತ್ತು ಎಸ್‌ಡಿಎಂಸಿ ಸದಸ್ಯರು ಕಳೆದ ವರ್ಷ ತಿಂಗಳುಗಟ್ಟಲೆ ನಿರಂತರ ಹೋರಾಟ, ಧರಣಿ, ಪಾದಯಾತ್ರೆ ನಡೆಸಿ ಶಿಕ್ಷಣ, ತಾಪಂ, ತಹಸೀಲ್ದಾರ್ ಕಚೇರಿ ವರೆಗೂ ಹೋಗಿ ಎಚ್ಚರಿಸಿದ್ದರು. ಗ್ರಾಮಸ್ಥರ ನಿರಂತರ ಹೋರಾಟ ಫಲವಾಗಿ ಕಂದಾಯ ಇಲಾಖೆಯಲ್ಲಿ ಕೆಲ ದಾಖಲೆಗಳು ಸರ್ಕಾರಿ ಶಾಲೆಗೆ ಸಂಬಂಧಿಸಿದ್ದು ಎಂದು ದಾಖಲಾಗಿದೆ.