Hassan: ಗೂರ್ಗಿಹಳ್ಳಿ ಎಸ್ಟೇಟ್ ಬಳಿ ಗುಂಡಿಕ್ಕಿ ಕಾಡಾನೆ ಕೊಂದ ಹಂತಕರು!
ಜಿಲ್ಲೆಯಲ್ಲಿ ಕಾಡಾನೆ-ಮಾನವನ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ರೈತರ ಜಮೀನಿನಲ್ಲಿ ಸಂಚರಿಸುತ್ತಿದ್ದ ಕಾಡಾನೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಮೇ.28): ಜಿಲ್ಲೆಯಲ್ಲಿ ಕಾಡಾನೆ-ಮಾನವನ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ರೈತರ ಜಮೀನಿನಲ್ಲಿ ಸಂಚರಿಸುತ್ತಿದ್ದ ಕಾಡಾನೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬೇಲೂರು ತಾಲ್ಲೂಕಿನ ದಾಸನಗುಡ್ಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಕಾಡಾನೆ ಸಮಸ್ಯೆಯಿದ್ದು ಇತ್ತೀಚೆಗೆ ತೀವ್ರಗೊಂಡಿದೆ. ಕಾಡಾನೆಗಳು ಜನನಿಬಿಡ ಪ್ರದೇಶದೊಳಗೆ ಎಂಟ್ರಿ ಕೊಡುತ್ತಿವೆ.
ಗಜಪಡೆ ದಾಳಿಯಿಂದ ಕಾಫಿ, ಭತ್ತ, ಬಾಳೆ, ಅಡಿಕೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದು ರೈತರು, ಕಾಫಿ ಬೆಳೆಗಾರರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನೊಂದೆಡೆ ಕಾಡಾನೆ ದಾಳಿಗೆ ಸುಮಾರು 69 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ಸಂತತಿ ಹೆಚ್ಚಿದೆ. ಬೇಲೂರು ತಾಲ್ಲೂಕಿನ, ಅರೇಹಳ್ಳಿ ಸುತ್ತಮುತ್ತ ಸುಮಾರು ಮೂವತ್ತು ಕಾಡಾನೆಗಳಿದ್ದು ಎರಡು ಗುಂಪುಗಳಾಗಿ ಬೇರ್ಪಟ್ಟಿವೆ. ಎರಡು ಹೆಣ್ಣಾನೆ, ಒಂದು ಗಂಡಾನೆ ಸೇರಿ ಮೂರು ಕಾಡಾನೆಗಳ ಹಿಂಡು ಗೂರ್ಗಿಹಳ್ಳಿ, ಕಡೆಗರ್ಜೆ, ಮಲಸಾವರ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿದ್ದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
Hassan: ದಿನ ಕಳೆದಂತೆ ಹೆಚ್ಚಿದ ಕಾಡಾನೆಗಳ ಸಮಸ್ಯೆ!
ಕಳೆದ ರಾತ್ರಿ ದಾಸನಗುಡ್ಡ ಗ್ರಾಮದಲ್ಲಿ ಸಯ್ಯದ್ ಸತ್ತರ್ ಎಂಬುವವರ ಭತ್ತದ ಗದ್ದೆಯಲ್ಲಿ ಸುಮಾರು ಹದಿನೆಂಟು ವರ್ಷದ ಗಂಡಾನೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದಾರೆ. ಕಾಡಾನೆ ಹತ್ಯೆ ಮಾಡಿರುವುದನ್ನು ಪರಿಸರವಾದಿ, ಪ್ರಾಣಿಪ್ರಿಯ ವಿಕ್ರಂ ಗೌಡ ಖಂಡಿಸಿದ್ದು,ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಸಿಎಫ್ ಶಂಕರ್.ಬಿ., ಡಿಸಿಎಫ್ ಡಾ.ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರಿನಿಂದ ವೈದ್ಯರು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕಣ್ಣಿನ ಮೇಲ್ಬಾಗದಲ್ಲಿ ಗುಂಡು ತಗುಲಿರುವುದು ಪತ್ತೆಯಾಗಿದೆ. ಈ ಭಾಗದಲ್ಲಿ ಮೂರು ಕಾಡಾನೆಗಳಿದ್ದು ಪ್ರತಿನಿತ್ಯ ಅವುಗಳ ಚಲನ-ವಲನಗಳನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿತ್ತು.
Hassan: ಬಾಳ್ಳುಪೇಟೆ ಬಳಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕರ ಕೂಗಾಟದಿಂದ ಅದೃಷ್ಟವಶಾತ್ ಪಾರಾದ ಮಹಿಳೆ
ಇಂದು ಬೆಳಿಗ್ಗೆ ಎರಡು ಕಾಡಾನೆಗಳು ಇರುವ ಲೋಕೇಷನ್ ಮಾತ್ರ ಸಿಕ್ಕಿದ್ದು, ಇನ್ನೊಂದು ಕಾಡಾನೆ ಇರುವ ಸ್ಥಳವನ್ನು ಹುಡುಕುತ್ತಿದ್ದ ವೇಳೆ ಗದ್ದೆಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಅದೇ ಗ್ರಾಮದ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಎಫ್ ಪ್ರಭು ತಿಳಿಸಿದರು. ಮೃತ ಕಾಡಾನೆ ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಕಾಡಾನೆಗಳ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೂ ಅರಣ್ಯ ಸಚಿವರು ಒಮ್ಮೆಯು ಇತ್ತ ತಿರುಗಿಯೂ ನೋಡಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ಕಾಡಾನೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಕಾಡಾನೆ- ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಹಿಡಿಯಬೇಕಿದೆ.