ಚಿಕನ್ ರೋಲ್ ಕೊಟ್ಟಿಲ್ಲವೆಂದು ಹೋಟೆಲ್ ಸಿಬ್ಬಂದಿ ರೂಮಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ಚಿಕನ್ ರೋಲ್ ಕೊಟ್ಟಿಲ್ಲವೆಂದು ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ
ಹೋಟೆಲ್ ಸಿಬ್ಬಂದಿಯಿಂದ ಒದೆ ತಿಂದು ಮರಳಿದ ಕಿಡಿಗೇಡಿಗಳು
ಏಟು ತಿಂದ ಸೇಡಿಗಾಗಿ ಸಿಬ್ಬಂದಿ ತಂಗಿದ್ದ ರೂಮಿಗೆ ಬೆಂಕಿ ಹಚ್ಚಿದ ದುರುಳರು
ಬೆಂಗಳೂರು (ಡಿ.13): ಸಿಲಿಕಾನ್ ಸಿಟಿ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಿಗುಪ್ಪೆ ಮುಖ್ಯರಸ್ತೆಯ ಅಶೋಕನಗರದ ಕುಮಾರ್ ಹೋಟೆಲ್‌ಗೆ ತಡರಾತ್ರಿ ತೆರಳಿದ ಮೂವರು ಯುವಕರು ಚಿಕನ್ ರೋಲ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಚಿಕನ್ ರೋಲ್ ಇಲ್ಲವೆಂದು ಹೇಳಿದ ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿದ್ದಾರೆ. ಈ ಜಗಳ ವಿಕೋಪಕ್ಕೆ ತಿರುಗಿ ಸಿಬ್ಬಂದಿ ಹೋಟೆಲ್ ಮುಚ್ಚಿ ಅವರು ತಂಗುವ ಕೊಠಡಿಯನ್ನು ನೋಡಿಕೊಂಡು ಅದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ದಿನನಿತ್ಯ ಜೀವನದಲ್ಲಿಬಜಗಳ ಯಾವ ಕಾರಣಕ್ಕೆ ಶುರುವಾಗುತ್ತದೆ ಎನ್ನುವುದು ತಿಳಿಯುವುದೇ ಇಲ್ಲ. ಎಲ್ಲರನ್ನೂ ಮಾತಿನಲ್ಲಿಯೇ ಸಮಾಧಾನ ಮಾಡಿ ಸಾಗಹಾಕುವುದು ಒಳ್ಳೆಯದು. ಒಂದು ವೇಳೆ ಹಲ್ಲೆ ಮಾಡಲು ಮುಂದಾದಲ್ಲಿ ಜಗಳವು ವಿಕೋಪಕ್ಕೆ ತಿರುಗಿ ಜೀವ ತೆಗೆಯುವ ಹಂತಕ್ಕೆ ತಲುಪುತ್ತವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೆ, ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಚಿಕನ್ ರೋಲ್ ವಿಚಾರವಾಗಿ ನಡೆದ ಘಟನೆಯೂ ಜೀವಕ್ಕೆ ಮಾರಕವಾಗುವ ಹಂತವನ್ನು ತಲುಪಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇನ್ನು ಚಿಕನ್ ರೋಲ್ ಇಲ್ಲವೆಂದು ಹೇಳಿದ ಹೋಟೆಲ್ ಸಿಬ್ಬಂದಿ ಮೇಲೆ ಜಗಳ ಆರಂಭಿಸಿದ ಯುವಕರು ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ನಂತರ ಹೋಟೆಲ್ ಸಿಬ್ಬಂದಿ ಹೆಚ್ಚಿನ ಜನರು ಇದ್ದುದರಿಂದ ಗಲಾಟೆ ಮಾಡಿದ ಯುವಕರನ್ನು ಹೊಡೆದು ಕಳುಹಿಸಿದ್ದಾರೆ.
ಚಿಕನ್ ರೋಲ್ ಇಲ್ಲ ಅಂದಿದಕ್ಕೆ ಹೋಟೆಲ್‌ಗೆ ಬೆಂಕಿ ಇಟ್ಟ ದುರುಳರು
ಏಟು ತಿಂದವರು ಬೆಂಕಿ ಇಟ್ಟರು: ಹೋಟೆಲ್‌ನ ಸಿಬ್ಬಂದಿಯಿಂದ ಏಟು ತಿಂದ ಗ್ರಾಹಕರಾದ ದೇವರಾಜ್, ಗಣೇಶ್ ಹಾಗೂ ಇನ್ನೊಬ್ಬ ವ್ಯಕ್ತಿ ತಡರಾತ್ರಿ ವೇಳೆಯೇ ದೇವೇಗೌಡ ಪೆಟ್ರೋಲ್ ಬಂಕ್ ಗೆ ಹೋಗುತ್ತಾರೆ. ಅಲ್ಲಿ ಸುಮಾರು ೮ ಲೀಟರ್ ಪೆಟ್ರೋಲ್ ಖರೀದಿ ಮಾಡಿಕೊಂಡು ಕ್ಯಾನ್‌ನಲ್ಲಿ ತರುತ್ತಾರೆ. ಅಲ್ಲಿಂದ ಹೊರಟವರು ಸೀದಾ ಕುಮಾರ್ ಹೋಟೆಲ್ ಪಕ್ಕದಲ್ಲಿ ಹೋಟೆಲ್ ಸಿಬ್ಬಂದಿ ತಂಗುವ ಕೊಠಡಿ ಬಳಿಗೆ ಹೋಗಿದ್ದಾರೆ. ಇದ್ದಕ್ಕಿದ್ದಂತೆಯೇ ಕೊಠಡಿಯ ಬಾಗಿಲು, ಕಿಟಕಿ ಹಾಗೂ ಇತರೆ ಬೆಂಕಿ ಹೊತ್ತಿಕೊಳ್ಳುವ ಉಪಕರಣಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಪ್ರಾಣಾಪಾಯದಿಂದ ಪರಾರಿ: ಇನ್ನು ಹೋಟೆಲ್ ಸಿಬ್ಬಂದಿ ತಂಗಿದ್ದ ಕೊಠಡಿಯಲ್ಲಿ ಒಬ್ಬ ಯುವಕ ಇನ್ನೂ ನಿದ್ರೆಗೆ ಜಾರಿರದ ಕಾರಣ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಎಲ್ಲರನ್ನೂ ಎಚ್ಚರಿಸಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡು ಮನೆಯ ಬಾಗಿಲು ತೆರೆದು ಓಡಿ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ನಂತರ ಪಕ್ಕದಲ್ಲಿಯೇ ಇದ್ದ ನಲ್ಲಿಯಿಂದ ನೀರನ್ನು ಹಿಡಿದು ಬಾಗಿಲು ಮತ್ತು ಕಿಟಕಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಆರಿಸಿದ್ದಾರೆ. ಈ ಘಟನೆ ಕುರಿತು ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ದೇವರಾಜ್ ಹಾಗೂ ಗಣೇಶನ್ನು ಬಂಧಿಸಿದ್ದಾರೆ.