ಉಳ್ಳಾಲ(ಡಿ.27): ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕ್‌ನಲ್ಲಿ ಬಂದ ತಂಡವೊಂದು ಅಪಘಾತ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್‌ ಹೌಸ್‌ ನಿವಾಸಿ ಪವನ್‌ (27) ಇರಿತಕ್ಕೊಳಗಾದವರು. ಚರ್ಚೊಂದರಲ್ಲಿ ಕ್ಯಾಟರಿಂಗ್‌ನಲ್ಲಿ ಕೆಲಸಕ್ಕಿದ್ದ ಸಹೋದರನನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ.

ಕುಡಿಬೇಡ ಎಂದಿದ್ದಕ್ಕೆ ಪತ್ನಿ ಎದುರೇ ಕೆರೆಗೆ ಹಾರಿ ಪ್ರಾಣಬಿಟ್ಟ ಕುಡುಕ ಗಂಡ

ಹಿಂಬದಿಯಿಂದ ಬಂದ ಅಪರಿಚಿತ ಬೈಕ್‌ ಇವರಿದ್ದ ಬೈಕ್‌ಗೆ ಗುದ್ದಿದೆ. ಈ ವೇಳೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆ ಬಳಿಕ ಇಬ್ಬರಿಗೂ ಚೂರಿಯಿಂದ ಬೆನ್ನು ಹಾಗೂ ಸೊಂಟದ ಭಾಗಕ್ಕೆ ಇರಿದ ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಓರ್ವನಿಗೆ ಎರಡು ಕಡೆಯಲ್ಲಿ ಗಾಯಗಳಾದರೆ, ಇನ್ನೋರ್ವನಿಗೆ ಒಂದು ಗಾಯವಾಗಿದೆ. ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.