ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಲವರ್​ ಜೊತೆ ಪತಿಯನ್ನೇ ಮುಗಿಸಿರುವ ಆರೋಪ ಹೊತ್ತ ಸೋನಂ ರಘುವಂಶಿ ಪ್ರಕರಣ ಕುತೂಹಲದ ತಿರುವು ಪಡೆದುಕೊಳ್ಳುತ್ತಿದ್ದು, ಹನಿಮೂನ್​ನಲ್ಲಿಯೇ ಲವರ್​ ಜೊತೆ ಮದ್ವೆಯಾಗಿರುವ ಸಂದೇಹ ವ್ಯಕ್ತವಾಗಿದೆ. ಏನಿದು? 

ಮಧ್ಯಪ್ರದೇಶದ ಇಂದೋರ್​ನ ರಾಜಾ ರಘುವಂಶಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಲೇ ಸಾಗಿದೆ. ಮೇಘಾಲಯಕ್ಕೆ ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಪತ್ನಿಯೇ ಸಾಯಿಸಿರುವ ಘಟನೆ ಇದಾಗಿದೆ. ಇದರ ತನಿಖೆಯ ವೇಳೆ ಆಘಾತಕಾರಿ ವಿಷಯಗಳು ಬಯಲಿಗೆ ಬರುತ್ತಿವೆ. ಇದೀಗ ಹನಿಮೂನ್​ನಲ್ಲಿ ಪತಿಯನ್ನು ಕೊಂದ ಬಳಿಕ ಸೋನಂ ರಘುವಂಶಿ ತನ್ನ ಲವರ್​ ರಾಜ್​ ಕುಶ್ವಾಹ್​ನನ್ನು ಮದುವೆಯಾಗಿರುವುದಾಗಿ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ, ಘಟನಾ ಸ್ಥಳದಲ್ಲಿ ಸಿಕ್ಕ ಎರಡು ಮಂಗಳಸೂತ್ರಗಳು. ಇದರಲ್ಲಿ ಒಂದು ರಾಜಾ ರಘುವಂಶಿ ಜೊತೆ ಮದುವೆಯಾಗುವ ಸಂದರ್ಭದಲ್ಲಿ ಕೊಟ್ಟ ಮಂಗಳಸೂತ್ರವಾಗಿರುವುದಾಗಿ ರಾಜಾ ಅವರ ಸಹೋದರ ಹೇಳಿದ್ದಾರೆ. ಆದರೆ ಇನ್ನೊಂದು ಎರಡೂ ಮನೆಯಿಂದ ಕೊಟ್ಟದ್ದಲ್ಲ. ಆದ್ದರಿಂದ ಅಲ್ಲೇ ಈಕೆ ರಾಜ್​ ಕುಶ್ವಾಹ್​ನನ್ನು ಮದುವೆಯಾಗಿರಬೇಕು ಅಥವಾ ಅಲ್ಲಿಯೇ ಮದುವೆಗೆ ಪ್ಲ್ಯಾನ್ ಮಾಡಿರಬೇಕು ಎಂದು ನಂಬಲಾಗಿದೆ.

ಅಷ್ಟಕ್ಕೂ ಮೊದಲೇ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದ ಸೋನಂ ಹನಿಮೂನ್​ಗೆ ಗಂಡನನ್ನು ಕರೆದುಕೊಂಡು ಹೋಗಿ ಮುಗಿಸಿರುವುದು ಇದಾಗಲೇ ತಿಳಿದುಬಂದಿದೆ. ಆಕೆಯ ಪ್ರಿಯಕರ ತಂದೆಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಮನೆಯವರು ಆ ಮದುವೆಗೆ ಒಪ್ಪಿರಲಿಲ್ಲ. ಇದಕ್ಕಾಗಿ ಬಲಿಯಾದದ್ದು ಅಮಾಯಕ ಯುವಕ! ಇದೀಗ ಈ ಕೇಸ್​ ಮಹತ್ವದ ತಿರುವು ಪಡೆದುಕೊಂಡಿದ್ದು, ಇವರಿಬ್ಬರ ಜಾತಕದಲ್ಲಿ ಮಂಗಳಿಕ ದೋಷವಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಇದನ್ನು ಮಂಗಲ ದೋಷ ಅಥವಾ ಕುಜ ದೋಷ ಎಂದೂ ಕರೆಯುತ್ತಾರೆ. ಜಾತಕದಲ್ಲಿ ಈ ದೋಷ ಇದ್ದರೆ ಮೊದಲಿಗೆ ಗಿಡಕ್ಕೆ ಮದುವೆ ಮಾಡಿ ಅದನ್ನು ಕಡಿದು ನಂತರ ನಿಜವಾದ ಮದುವೆ ಮಾಡಿಸುವ ವಾಡಿಕೆ ಇದೆ. ಏಕೆಂದರೆ ಹೆಣ್ಣಿಗೆ ಈ ದೋಷ ಇದ್ದರೆ ಗಂಡ ಸಾಯುತ್ತಾನೆ ಎನ್ನುತ್ತದೆ ಜ್ಯೋತಿಷಶಾಸ್ತ್ರ. ಆದರೆ ಇಲ್ಲಿ ಸೋನಂ ತನ್ನ ಜಾತಕದಲ್ಲಿನ ಈ ದೋಷ ಪರಿಹಾರಕ್ಕೆ ಪತಿಯನ್ನೇ ಸಾಯಿಸಿ ಲವರ್​ ಜೊತೆ ಮದುವೆಯಾಗುವ ಪ್ಲ್ಯಾನ್ ಮಾಡಿದ್ದಳು ಎಂದು ಇದಾಗಲೇ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

 

ಅಷ್ಟಕ್ಕೂ, ಕೃತ್ಯಕ್ಕೂ ಮುನ್ನ ಸೋನಂ ತನ್ನ ಲವರ್​ ರಾಜ್​ ಕುಶ್ವಾಹ್ ಮೂಲಕ ಹನಿಮೂನ್​ಗೆ ಹೋಗುವ ಮುನ್ನ ಮನೆಯ ಬಾಗಿಲಿಗೆ ಪತಿಯ ಗೊಂಬೆಯನ್ನು ನೇತು ಹಾಕಿರುವುದು ಇದಾಗಲೇ ಬೆಳಕಿಗೆ ಬಂದಿದೆ. ಆಕೆ ಅತ್ತ ಹನಿಮೂನ್​ಗೆ ಹೋಗುತ್ತಿದ್ದಂತೆಯೇ, ಮೊದಲೇ ಈ ಗೊಂಬೆಯನ್ನು ನೇತು ಹಾಕುವಂತೆ ತನ್ನ ಪ್ರಿಯಕರನಿಗೆ ಆಕೆ ಹೇಳಿದ್ದಳು. ಆದರೆ, ಇದು ಮನೆಯ ಒಳಿತಿಗಾಗಿ ಎಂದು ಮನೆಯವರನ್ನು ಆಕೆ ನಂಬಿಸಿದ್ದಳು. ಅಲ್ಲಿ ಕೊಲೆಯಾದ ಬಳಿಕ ಆ ಗೊಂಬೆಯನ್ನು ತೆಗೆದಿದ್ದಳು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಬಗ್ಗೆ ಮೃತ ರಾಜಾ ರಘುವಂಶಿ ಅವರ ಅಪ್ಪ ಅಶೋಕ್​ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. "ಸೋನಂ ಆಜ್ಞೆಯ ಮೇರೆಗೆ, ರಾಜಾ ನಮ್ಮ ಮನೆಯ ಮುಖ್ಯ ಬಾಗಿಲಿಗೆ ಒಂದು ಬಂಡಲ್‌ನಂತಹ ವಸ್ತುವನ್ನು ನೇತು ಹಾಕಿದ್ದ. ಅದನ್ನು ನೇತು ಹಾಕುವುದರಿಂದ ಮನೆಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ನಮಗೆಲ್ಲಾ ನಂಬಿಸಿದ್ದ. ಆದರೆ ಈಗ ಅದರ ಬಗ್ಗೆ ವಿಚಾರಿಸಿದಾಗ ಅದು ರಾಜಾನ ಗೊಂಬೆಯಾಗಿತ್ತು. ಸೋನಂ ಕೊಲೆ ಮಾಡುವುದಕ್ಕೂ ಮುನ್ನ ತಂತ್ರ ಮಂತ್ರಗಳನ್ನು ಪ್ರಯೋಗ ಮಾಡಿದ್ದಳು. ಅವಳು ಇದನ್ನೆಲ್ಲಾ ನಂಬುತ್ತಾಳೆ ಎನ್ನುವುದು ಈಗ ತಿಳಿದು ಬಂದಿದೆ. ಮಾಟಮಂತ್ರವನ್ನು ನನ್ನ ಮಗನ ಮೇಲೆ ಪ್ರಯೋಗ ಮಾಡಿದ್ದಾಳೆ ಎಂದು ಗೋಳಾಡುತ್ತಿರುವ ಅಶೋಕ್​ ಅವರು ಎಲ್ಲರಿಗೂ ಗಲ್ಲುಶಿಕ್ಷೆ ನೀಡುವಂತೆ ಕಣ್ಣೀರು ಇಡುತ್ತಿದ್ದಾರೆ.