ಬೆಂಗಳೂರು(ನ.28): ನಗರದ ಜೆ.ಸಿ.ರಸ್ತೆಯ ಲಾಡ್ಜ್‌ವೊಂದರಲ್ಲಿ ಅಂಗನವಾಡಿ ಶಿಕ್ಷಕಿಯನ್ನು ಉಸಿರುಗಟ್ಟಿಸಿ ಕೊಂದು ಆಕೆಯ ಪ್ರಿಯಕರ ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಸಿದ್ದಾಪುರದ ಗುಟ್ಟೆಪಾಳ್ಯದ ನಿವಾಸಿದ ಕಮಲಾ (38) ಕೊಲೆಯಾದ ಮಹಿಳೆ. ಈ ಕೃತ್ಯ ಎಸಗಿ ತಲೆಮರೆಸಿಕೊಂಡಿರುವ  ಮೃತಳ ಪ್ರಿಯಕರ ದಿಲೀಪ್‌ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ಜೆ.ಸಿ. ರಸ್ತೆಯ ಅರ್ಚನಾ ಕಂಫರ್ಟ್‌ ಲಾಡ್ಜ್‌ನಲ್ಲಿ ರೂಂ ಬಾಡಿಗೆ ಪಡೆದು ಗೆಳೆಯನ ಜತೆ ಕಮಲಾ ತಂಗಿದ್ದಳು. ಆ ದಿನವೇ ಆಕೆಯನ್ನು ಹತ್ಯೆಗೈದು ಆರೋಪಿ ತಪ್ಪಿಸಿಕೊಂಡಿದ್ದಾನೆ. ಮೃತದೇಹ ಕೊಳೆತು ದುರ್ನಾತ ಬಂದಿದ್ದರಿಂದ ಆತಂಕಗೊಂಡ ಲಾಡ್ಜ್‌ ಸಿಬ್ಬಂದಿ ಪೊಲೀಸರಿಗೆ ಶುಕ್ರವಾರ ಬೆಳಗ್ಗೆ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿ ಸಿಬ್ಬಂದಿ, ಲಾಡ್ಜ್‌ ಕೊಠಡಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲವ್‌, ದೋಖಾ:

ಎರಡು ದಶಕಗಳ ಹಿಂದೆ ಎಲೆಕ್ಟ್ರಿಷಿಯನ್‌ ಓಬಳೇಶ್‌ ಹಾಗೂ ಕಮಲಾ ವಿವಾಹವಾಗಿದ್ದು, ಈ ದಂಪತಿಗೆ ಐವರು ಮಕ್ಕಳಿದ್ದಾರೆ. ಸಿದ್ದಾಪುರದ ಗುಟ್ಟೆಪಾಳ್ಯದಲ್ಲಿ ಕಮಲಾ ಕುಟಂಬ ನೆಲೆಸಿತ್ತು. ಐದು ವರ್ಷಗಳ ಹಿಂದೆ ಟೈಲರಿಂಗ್‌ ತರಬೇತಿಗೆ ಸಲುವಾಗಿ ಹೋಗಿದ್ದಾಗ ಆಕೆಗೆ ಟೈಲರ್‌ ದಿಲೀಪ್‌ ಪರಿಚಯವಾಗಿದೆ. ಆತ ಸಹ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ಗೆಳೆತನ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಣಿಬೆನ್ನೂರು: ಎರಡೂವರೆ ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

ಮನೆ ಹತ್ತಿರದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದ ಕಮಲಾ, ಎಂದಿನಂತೆ ನ.24ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಬಂದಿದ್ದಾಳೆ. ಬಳಿಕ ಗೆಳೆಯನ ಜತೆ ಕಲಾಸಿಪಾಳ್ಯ ಹತ್ತಿರದ ಜೆ.ಸಿ.ರಸ್ತೆಯ ಅರ್ಚನಾ ಕಂಫರ್ಟ್‌ ಲಾಡ್ಜ್‌ನಲ್ಲಿ ತನ್ನ ಹೆಸರಿನಲ್ಲಿ ಕೊಠಡಿ ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದಳು. ಆ ದಿನವೇ ಗೆಳತಿಯನ್ನು ಉಸಿರುಗಟ್ಟಿ ಕೊಂದು ಆರೋಪಿ ಪರಾರಿಯಾಗಿದ್ದಾನೆ. ಮರುದಿನ ಕೊಠಡಿ ಬಾಗಿಲು ಬಂದ್‌ ಆಗಿರುವುದು ಕಂಡು ಲಾಡ್ಜ್‌ ಸಿಬ್ಬಂದಿ, ದಿಲೀಪ್‌ ಮೊಬೈಲ್‌ಗೆ ಕರೆ ಮಾಡಿದ್ದರೂ ಆತ ಸ್ವೀಕರಿಸಿಲ್ಲ. ಮೂರು ದಿನಗಳ ನಂತರ ಮೃತದೇಹ ಕೊಳೆತು ದುರ್ವಾಸನೆ ಲಾಡ್ಜ್‌ ತುಂಬಾ ಹರಡಿದೆ. ಆಗ ಅನುಮಾನಗೊಂಡ ಲಾಡ್ಜ್‌ ಕೆಲಸಗಾರರು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಬಳಿಕ ಸತ್ಯಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಡ್ಜ್‌ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ನ.24ರ ಬೆಳಗ್ಗೆ 11.30ಕ್ಕೆ ಕಮಲಾ ಮತ್ತು ದಲೀಪ್‌ ಲಾಡ್ಜ್‌ಗೆ ಬಂದಿರುವ ದೃಶ್ಯ ಪತ್ತೆಯಾಗಿದೆ. ಆದರೆ ಮಧ್ಯಾಹ್ನ 2.30ರಲ್ಲಿ ಲಾಡ್ಜ್‌ ಹೊರ ಹೋದವನು ಮತ್ತೆ ಮರಳಿಲ್ಲ. ಅಲ್ಲದೆ ಆತನ ಮೊಬೈಲ್‌ ಕೂಡಾ ಸ್ವಿಚ್ಡ್‌ ಆಫ್‌ ಆಗಿದೆ. ಹೀಗಾಗಿ ಕಣ್ಮರೆಯಾಗಿರುವ ದಿಲೀಪ್‌ ಕೊಲೆ ಮಾಡಿರಬಹುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.