ಬೆಂಗಳೂರು(ಅ. 25):ವಿವಾಹ ವಾರ್ಷಿಕೋತ್ಸವ ದಿನವೇ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೃಹಲಕ್ಷ್ಮಿ ಲೇಔಟ್‌ ನಿವಾಸಿ ರೋಜಾ (24) ಮೃತರು. ಮೃತ ಮಹಿಳೆಯ ಪೋಷಕರು ಕೊಟ್ಟದೂರಿನ ಮೇರೆಗೆ ಪತಿ ವಿಕಾಸ್‌ ಹಾಗೂ ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದವರಾಗಿದ್ದ ರೋಜಾ ಪೋಷಕರು, ಕಳೆದ ವರ್ಷ ವಿಕಾಸ್‌ ಎಂಬಾತನ ಜತೆ ಮದುವೆ ಮಾಡಿಕೊಟ್ಟಿದ್ದರು. ವಿಕಾಸ್‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರೋಜಾ ಗೃಹಿಣಿಯಾಗಿದ್ದರು. ಅತ್ತೆ, ಮಾವನ ಜತೆ ಪೀಣ್ಯದ ಗೃಹಲಕ್ಷ್ಮೀ ಲೇಔಟ್‌ನಲ್ಲಿ ವಾಸವಿದ್ದರು. ದಂಪತಿ ಮದುವೆಯಾದ ಆರಂಭದ ದಿನಗಳಲ್ಲಿ ಅನೋನ್ಯವಾಗಿದ್ದರು.

ಚಿತ್ರದುರ್ಗ ಕಂಪ್ಯೂಟರ್ ಕ್ಲಾಸು..ಮದುವೆಯಾಗಿ 2 ವರ್ಷದ ನಂತ್ರ ಗಂಡನ ಬಿಟ್ಟು ಹೊರಟಳು!

ಇತ್ತೀಚೆಗೆ ಕೆಲ ತಿಂಗಳಿಂದ ಪತಿ ವಿಕಾಸ್‌ ಹಾಗೂ ಅತ್ತೆ, ಮಾವ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ಈ ವಿಚಾರವನ್ನು ನಮ್ಮ ಬಳಿ ಹೇಳಿಕೊಂಡಿದ್ದಳು. ಇತ್ತೀಚೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಶುಕ್ರವಾರ ತಡರಾತ್ರಿ ಮನೆಯ ಕೊಠಡಿಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ.

ಈ ಕುರಿತು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿ ರೋಜಾ ಪೋಷಕರು ದೂರು ಕೊಟ್ಟಿದ್ದಾರೆ. ರೋಜಾ ಮತ್ತು ವಿಕಾಸ್‌ ದಂಪತಿ ಮದುವೆಯಾಗಿ ಶನಿವಾರಕ್ಕೆ ಒಂದು ವರ್ಷವಾಗುತ್ತಿತ್ತು. ಇದರ ನಡುವೆಯೇ ರೋಜಾ ಅನಾಹುತ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಹೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೀಣ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.