ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಜೀಪನ್ನೇ ಎಗರಿಸಿದ ಖದೀಮನನ್ನು ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪಡೀಲ್‌ ಅರಣ್ಯ ಇಲಾಖೆಯ ವಸತಿಗೃಹ..

ಮಂಗಳೂರು (ಜೂ.03): ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಜೀಪನ್ನೇ ಎಗರಿಸಿದ ಖದೀಮನನ್ನು ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪಡೀಲ್‌ ಅರಣ್ಯ ಇಲಾಖೆಯ ವಸತಿಗೃಹ ಬಳಿ ನಿಲ್ಲಿಸಿದ್ದ ಇಲಾಖಾ ಜೀಪನ್ನು ರಾತ್ರೋರಾತ್ರಿ ಕದ್ದು ಖದೀಮನೊಬ್ಬ ಪರಾರಿಯಾಗಿದ್ದ. ಜಿಪಿಎಸ್‌ ಬಳಸಿ ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಇಲಾಖೆ ಸಿಬ್ಬಂದಿ ಕುಂದಾಪುರದ ಕೋಟೇಶ್ವರದ ಮೂಡುಗೋಪಾಡಿ ಎಂಬಲ್ಲಿ ಪತ್ತೆಮಾಡಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಕೇರಳದ ಕೋಯಿಕ್ಕೋಡ್‌ ನಿವಾಸಿ ನದೀಮ್‌(23) ಬಂಧಿತ ಆರೋಪಿ.

ಮಂಗಳೂರು ಪಡೀಲಿನ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಸಂಚಾರಿ ದಳದ ಆರ್‌ಎಫ್‌ಒ ಸಂತೋಷ್‌ ರೈ ಅವರ ಜೀಪನ್ನು ನಿಲ್ಲಿಸಲಾಗಿತ್ತು. ಇನ್ನಿತರ ವಾಹನಗಳ ಜೊತೆ ಈ ಜೀಪನ್ನು ನಿಲ್ಲಿಸಿ ಚಾಲಕ ವಸತಿಗೃಹದಲ್ಲಿ ಮಲಗಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಜೀಪು ನಾಪತ್ತೆಯಾಗಿತ್ತು. ಕೂಡಲೇ ಜೀಪು ಚಾಲಕ ಆರ್‌ಎಫ್‌ಒಗೆ ಮಾಹಿತಿ ನೀಡಿದ್ದು, ಅವರು ಜಿಪಿಎಸ್‌ ಆಧಾರದಲ್ಲಿ ಜೀಪನ್ನು ಪತ್ತೆ ಮಾಡಿದ್ದಾರೆ.

ಕೇರಳದಿಂದ ಬೆಳಗ್ಗೆ ನಸುಕಿನ ಜಾವ ಮಂಗಳೂರಿಗೆ ಬಂದಿದ್ದ ನದೀಮ್‌ ಪಡೀಲಿನ ಅರಣ್ಯ ಇಲಾಖೆಯ ವಸತಿಗೃಹದ ಬಳಿ ನಿಲ್ಲಿಸಿದ್ದ ಈ ಜೀಪಿನ ಗಾಜು ಒಡೆದು ಮತ್ತೊಂದು ಡ್ರಾಯರಿನಲ್ಲಿ ಇರಿಸಿದ್ದ ಇನ್ನೊಂದು ಕೀಯನ್ನು ಎಗರಿಸಿದ್ದ. ಈ ವೇಳೆ ಸೈರನ್‌ ವಯರ್‌ನ್ನು ತುಂಡು ಮಾಡಿ ಜೀಪನ್ನು ಚಾಲನೆ ಮಾಡಿಕೊಂಡು ಪರಾರಿಯಾಗಿದ್ದ. ಬೆಳಗ್ಗೆ 7 ಗಂಟೆ ಸುಮಾರಿಗೆ ಕರ್ತವ್ಯಕ್ಕೆ ಬಂದ ಚಾಲಕ ನೋಡಿದಾಗ ಜೀಪು ನಾಪತ್ತೆಯಾಗಿತ್ತು. ಈತ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.

ಜೀಪಿಗೆ ಅಳವಡಿಸಿದ್ದ ಜಿಪಿಎಸ್‌ ಲೊಕೇಶನ್‌ನ್ನು ಟ್ರ್ಯಾಕ್‌ ಮಾಡಿದಾಗ ಕುಂದಾಪುರದ ಕೋಟೇಶ್ವರದ ಮನೆಯೊಂದರ ಬಳಿ ಜೀಪು ನಿಲ್ಲಿಸಿರುವುದು ಕಂಡುಬಂದಿತ್ತು. ಕೂಡಲೇ ಕುಂದಾಪುರ ಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಜೀಪು ಪತ್ತೆ ಮಾಡುವಂತೆ ಸೂಚಿಸಿದ್ದರು. ಮೂಡುಗೋಪಾಡಿ ಎಂಬಲ್ಲಿ ಮುಖ್ಯ ರಸ್ತೆ ಸಮೀಪ ಮನೆಯ ಅಂಗಳದಲ್ಲಿ ಜೀಪು ನಿಲ್ಲಿಸಿದ ಜಾಗಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳುತ್ತಿದ್ದಂತೆ ಆರೋಪಿ ಅಲರ್ಟ್‌ ಆಗಿದ್ದು, ಜೀಪಿನೊಂದು ಹೆದ್ದಾರಿಗೆ ಬಂದು ಪರಾರಿಯಾಗಲು ಯತ್ನಿಸಿದ್ದಾನೆ.

ಲೊಕೇಶನ್‌ ಟ್ರ್ಯಾಕ್‌ ಮಾಡುತ್ತಿದ್ದ ಆರ್‌ಎಫ್ಒ ಅವರು ಜೀಪಿನ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಸಿಬ್ಬಂದಿ ಜೀಪನ್ನು ಅಡ್ಡಗಟ್ಟಿದ್ದಾರೆ. ಆರೋಪಿ ನದೀಮ್‌ ಜೀಪನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು, ಆಗ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಆರೋಪಿ ನದೀಮ್‌ ಕೂಳೂರಿನ ಪೆಟ್ರೋಲ್‌ ಬಂಕ್‌ನಲ್ಲಿ ಡೀಸೆಲ್‌ ತುಂಬಿಸಿಕೊಂಡು ಹಣ ನೀಡದೆ ಪರಾರಿಯಾಗಿದ್ದ. ನಸುಕಿನಲ್ಲಿ ಘಟನೆ ನಡೆದ ಕಾರಣ ಬಂಕಿನ ಸಿಬ್ಬಂದಿ ಸಿಸಿ ಟಿವಿ ಪರಿಶೀಲಿಸಿ ಜೀಪು ನಂಬರು ಸಮೇತ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೋಧಿಸಿದಾಗ ಅದು ಅರಣ್ಯ ಸಂಚಾರಿ ದಳದ ಜೀಪು ಎಂಬುದು ಗೊತ್ತಾಗಿತ್ತು.

ಸರಿಯಾದ ಮಾಹಿತಿ ನೀಡಿಲ್ಲ

ಜೀಪು ಕಳವಾದ ಬಗ್ಗೆ ಆರ್‌ಎಫ್‌ಒ ಅವರು ಕಂಕನಾಡಿ ಠಾಣೆಗೆ ದೂರು ನೀಡಿದ್ದರು. ಕಂಕನಾಡಿ ಪೊಲೀಸರು ಕುಂದಾಪುರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಆರೋಪಿ ನದೀಮ್‌ ವೃತ್ತಿಪರ ಕಳ್ಳನಾಗಿರುವ ಶಂಕೆ ಇದ್ದು, ಜೀಪಿನ ಗಾಜು ಒಡೆದು ಕೀ ಎಗರಿಸಿರುವುದು, ಸೈರನ್‌ ವಯರ್‌ ತುಂಡು ಮಾಡಿರುವುದು, ಸರ್ಕಾರಿ ವಾಹನವನ್ನೇ ಎಗಿರಿಸುವುದು ಆತನ ಚಾಲಾಕಿತನವನ್ನು ತೋರಿಸಿದೆ. ಪೊಲೀಸರ ತನಿಖೆ ವೇಳೆ ಆತ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಜೀಪು ಕದ್ದೊಯ್ದ ಜಾಗದಲ್ಲಿ ಆತ ತನ್ನ ಚಪ್ಪಲಿಯನ್ನು ಬಿಟ್ಟಿದ್ದು, ಅಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ಹಳೆ ಚಪ್ಪಲಿಯನ್ನು ಧರಿಸಿ ತೆರಳಿದ್ದನು.