ಮಂಡ್ಯದ ನಾಗಮಂಗಲದಲ್ಲಿ 'ರಾಮ-ಲಕ್ಷಣ' ಅದೃಷ್ಟದ ನಾಣ್ಯವೆಂದು ನಂಬಿಸಿ ಲಕ್ಷ ರೂಪಾಯಿ ವಂಚಿಸಲು ಯತ್ನಿಸಿದ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರಿನ ವ್ಯಕ್ತಿಯನ್ನು ಸಂಪರ್ಕಿಸಿ ವಂಚಿಸಲು ಯತ್ನಿಸಿದ್ದರು.

ಮಂಡ್ಯ(ಡಿ.20): ಮಾಂತ್ರಿಕ ಶಕ್ತಿಯಿರುವ ಅದೃಷ್ಟದ 'ರಾಮ-ಲಕ್ಷಣ' ನಾಣ್ಯ ಎಂದು ನಂಬಿಸಿ ಸಾರ್ವಜನಿಕರಿಗೆ ವಂಚಿಸಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ಹಳೆಯ ತಾಮ್ರದ ನಾಣ್ಯ ನೀಡಿ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಬಲೆ

ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್ ಹಾಗೂ ಸುಧೀರ್ ಎಂಬುವವರೇ ಸಾರ್ವಜನಿಕರಿಂದ ಗೂಸಾ ತಿಂದ ಆರೋಪಿಗಳು. ಈ ಮೂವರು ಯುವಕರ ತಂಡವು ಅಮಾಯಕರಿಗೆ ಇದೊಂದು ಅದೃಷ್ಟ ತರುವ ಮಾಂತ್ರಿಕ ನಾಣ್ಯ ಎಂದು ನಂಬಿಸಿ ವಂಚಿಸುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದ ವಂಚಕರು, ಒಂದು ಲಕ್ಷ ರೂಪಾಯಿಗೆ ನಾಣ್ಯ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿದ್ದರು.

ಬಸ್ ನಿಲ್ದಾಣದ ಬಳಿ ನಡೆದ ಹೈಡ್ರಾಮಾ

ನಾಣ್ಯ ಪಡೆಯಲು ಬೆಂಗಳೂರಿನ ವ್ಯಕ್ತಿ ನಾಗಮಂಗಲ ಪಟ್ಟಣದ ಕೆಎಸ್‌ಆರ್‌ಟಸಿ ಬಸ್ ನಿಲ್ದಾಣದ ಬಳಿ ಆಗಮಿಸಿದ್ದರು. ಈ ವೇಳೆ ಆರೋಪಿಗಳು ಮಾಂತ್ರಿಕ ನಾಣ್ಯವೆಂದು ಹಳೆಯ ತಾಮ್ರದ ನಾಣ್ಯವೊಂದನ್ನು ನೀಡಿ, ವ್ಯಕ್ತಿಯಿಂದ ಒಂದು ಲಕ್ಷ ರೂಪಾಯಿ ಹಣ ಪಡೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ, ವಂಚನೆಗೊಳಗಾದ ವ್ಯಕ್ತಿ 'ಕಳ್ಳ ಕಳ್ಳ' ಎಂದು ಕಿರುಚಾಡಿದ್ದಾರೆ.

ಸಾರ್ವಜನಿಕರಿಂದ ಸಿಕ್ಕಿಬಿದ್ದ ಆರೋಪಿಗಳು

ವ್ಯಕ್ತಿಯ ಚೀರಾಟ ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಚುರುಕಾಗಿದ್ದಾರೆ. ಓಡುತ್ತಿದ್ದ ಯುವಕರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಆರೋಪಿಗಳ ವಂಚನೆಯ ಜಾಲದ ಬಗ್ಗೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಯಶ್ವಂತ್ ರಾವ್ ಮತ್ತು ಸುಧೀರ್‌ಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಇದೇ ವೇಳೆ ಗುಂಪಿನಲ್ಲಿದ್ದ ಮತ್ತೊಬ್ಬ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಪೊಲೀಸ್ ವಶಕ್ಕೆ ವಂಚಕರು

ಸ್ಥಳಕ್ಕೆ ಆಗಮಿಸಿದ ನಾಗಮಂಗಲ ಟೌನ್ ಪೊಲೀಸರು, ಸಾರ್ವಜನಿಕರ ವಶದಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

ಮಾಂತ್ರಿಕ ನಾಣ್ಯ, ಅದೃಷ್ಟದ ವಸ್ತುಗಳ ಹೆಸರಲ್ಲಿ ನಡೆಯುವ ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು.