ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್‌ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದಾನೆ. 

ಮಂಡ್ಯ (ಜು.07): ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್‌ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದು, ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣಂಚನ್ನೂ ತೇವಗೊಳಿಸಿದೆ. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ರಾಕೇಶ್, ಬುಧವಾರ ಬೆಳಗ್ಗೆ ಮೈಸೂರಿನ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಲು ತೆರಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರೆ ಸ್ವೀಕರಿಸಿದ್ದು ರಾಕೇಶ್ ಅಲ್ಲ

ಮನೆ ಬಿಡುವ ಮುನ್ನ ತಾಯಿಗೆ ₹1,000 ಅನ್ನು ಫೋನ್‌ಪೇ ಮೂಲಕ ಕಳುಹಿಸಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಲಸ ಮುಗಿದ ಬಳಿಕ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದ ರಾಕೇಶ್, ರಾತ್ರಿ ಮತ್ತೆ ಕುಟುಂಬವನ್ನು ಸಂಪರ್ಕಿಸಿರಲಿಲ್ಲ. ಮಗ ತಡವಾಗುತ್ತಿದ್ದಂತೆ ಆತಂಕಗೊಂಡ ತಾಯಿ ಹಲವು ಬಾರಿ ಕರೆ ಮಾಡಿದ್ದರು. ಆದರೆ ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಕರೆ ಸ್ವೀಕರಿಸಿದ್ದು ರಾಕೇಶ್ ಅಲ್ಲ, ಬೇರೊಬ್ಬ ವ್ಯಕ್ತಿ. ಆಗ ಮೊಬೈಲ್ ಎಲ್ಲೋ ಕಳೆದುಹೋಗಿರಬಹುದು ಎಂದುಕೊಂಡಿದ್ದ ತಾಯಿಗೆ, ಕೆಲವೇ ಗಂಟೆಗಳಲ್ಲಿ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿದೆ.

ಆರೋಪಿಗಳ ಪತ್ತೆಗೆ ತನಿಖೆ

ತಾಯಿ ಹೇಳುವ ಪ್ರಕಾರ, "ರಾತ್ರಿ ಪ್ರಯಾಣ ಬೇಡ, ಸಂಬಂಧಿಕರ ಮನೆಯಲ್ಲಿ ಉಳಿದು ಬೆಳಿಗ್ಗೆ ಬಾ" ಎಂದು ಮಗನಿಗೆ ಹೇಳಿದ್ದರು. ರಾಕೇಶ್ ಕೂಡ ಬೆಳಿಗ್ಗೆ ಬರುತ್ತೇನೆ ಎಂದಿದ್ದ. ಆದರೆ ಆ ಮಾತು ಕೊನೆಯ ಮಾತಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪ್ರಾಥಮಿಕ ಮಾಹಿತಿಯಂತೆ, ಬುಧವಾರ ಮಧ್ಯರಾತ್ರಿ ಕೆ.ಆರ್.ಎಸ್. ಬಸ್ ನಿಲ್ದಾಣದ ಬಳಿ ರಾಕೇಶ್ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾರೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ನನ್ನ ಮಗನೇ ನನ್ನ ಪ್ರಪಂಚ

ಅತ್ಯಂತ ವೇದನಾದಾಯಕ ಸಂಗತಿಯೆಂದರೆ, ಘಟನೆ ನಡೆದ ದಿನವೇ ರಾಕೇಶ್ ಅವರ ಹುಟ್ಟುಹಬ್ಬವಾಗಿತ್ತು. "ನನ್ನ ಮಗನೇ ನನ್ನ ಪ್ರಪಂಚ... ಯಾರಿಗೆ ಏನು ದ್ರೋಹ ಮಾಡಿದ್ದನೋ ಗೊತ್ತಿಲ್ಲ" ಎಂದು ತಾಯಿ ಎದೆಬಡಿದುಕೊಂಡು ಕಣ್ಣೀರಿಡುತ್ತಿದ್ದ ದೃಶ್ಯ ಕಂಡವರ ಮನಕಲಕುವಂತಿತ್ತು. ಈ ಹ*ತ್ಯೆಗೆ ನಿಖರ ಕಾರಣವೇನು, ದುಷ್ಕರ್ಮಿಗಳು ಯಾರು ಎಂಬುದು ಇನ್ನಷ್ಟೇ ತನಿಖೆಯಿಂದ ಬಹಿರಂಗವಾಗಬೇಕಿದೆ.