Asianet Suvarna News Asianet Suvarna News

Attempt to Murder Case: ಪ್ರೀತಿ ನಿರಾಕರಿಸಿದ ಯುವತಿಗೆ ಇರಿದವನಿಗೆ 5 ವರ್ಷ ಜೈಲು

*  ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರು. ದಂಡ 
*  ಪ್ರೀತಿ ನಿರಾಕರಿಸಿದ್ದ ಯುವತಿ
*  ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು 

Man sentenced to 5 years in jail For Attempt to Murder in Bengaluru grg
Author
Bengaluru, First Published Feb 13, 2022, 6:03 AM IST | Last Updated Feb 13, 2022, 6:14 AM IST

ಬೆಂಗಳೂರು(ಫೆ.13):  ಪ್ರೀತಿ ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ್ದ ಅಪರಾಧಿಗೆ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್‌ ಬಿ. ಸಂಕದ್‌ ಅವರು ಅಪರಾಧಿ ಅನಿಲ್‌ ಕುಮಾರ್‌ ಅಲಿಯಾಸ್‌ ರಾಹುಲ್‌ಗೆ ಶಿಕ್ಷೆ ವಿಧಿಸಿ, ದಂಡದ ಮೊತ್ತವನ್ನು ಸಂತ್ರಸ್ತ ಯುವತಿಗೆ ಪರಿಹಾರದ ರೂಪದಲ್ಲಿ ನೀಡಲು ಆದೇಶಿಸಿದ್ದಾರೆ.

ದಂಡದ ಮೊತ್ತ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಸಾಮಾನ್ಯ ಶಿಕ್ಷೆ ಅನುಭವಿಸಬೇಕು. ಅಪರಾಧಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಪರಿಹಾರ ಮೊತ್ತವನ್ನು ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

Rape Case: ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ: ಎಎಸ್‌ಐಗೆ 20 ವರ್ಷ ಜೈಲು ಶಿಕ್ಷೆ

ಪ್ರಕರಣದ ವಿವರ:

ಯಲಹಂಕದ ಅನಿಲ್‌ 23 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಈತನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಇದ್ದಕ್ಕೆ ಸಿಟ್ಟಿಗೆದ್ದ ರಾಹುಲ್‌ ಯುವತಿಯ ಮೇಲೆ ದಾಳಿ ನಡೆಸಿ ಹೊಟ್ಟೆ, ಕುತ್ತಿಗೆ ಹಾಗೂ ಕೆನ್ನೆಗೆ ಚಾಕುವಿನಿಂದ ಇರಿದಿದ್ದನು.

ಘಟನೆ ಸಂಬಂಧ ಯಲಹಂಕ ಠಾಣೆ ಪೊಲೀಸರು ಐಪಿಸಿ ಸೆಕ್ಷನ್‌ 307ರ ಅಡಿ(ಕೊಲೆ ಯತ್ನ) ಪ್ರಕರಣ ದಾಖಲಿಸಿ ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ಚನ್ನಪ್ಪ ಜಿ. ಹರಸೂರ ಮತ್ತು ವಿಶ್ವನಾಥದೇವ್‌ ಅವರು ವಾದ ಮಂಡಿಸಿದ್ದರು.

ಪೊಲೀಸರ ಮೇಲೆ ಹಲ್ಲೆ: ಅಪರಾಧಿಗೆ ಜೈಲು ಶಿಕ್ಷೆ

ಕಲಬುರಗಿ:  ಪೊಲೀಸರ(Police) ಮೇಲೆ ಹಲ್ಲೆ(Assault), ಕೊಲೆ ಪ್ರಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಾಹನ ಚಾಲಕ ನಾಗೇಶ ಅಲಿಯಾಸ್‌ ನಾಗರಾಜ ಪೂಜಾರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 6 ವರ್ಷ ಜೈಲು ಶಿಕ್ಷೆ ಹಾಗೂ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಶಿವಾಜಿ ನಗರ ನಿವಾಸಿ, ಖಾಸಗಿ ವಾಹನ ಚಾಲಕನಾಗಿದ್ದ ನಾಗೇಶ (25) ಶಿಕ್ಷೆಗೆ ಒಳಗಾಗಿದ್ದಾರೆ. 2018ರಲ್ಲಿ ಕಲಬುರಗಿ ತಾಲೂಕಿನ ಕೆರೆಭೋಸಗಾದ ಹೊಲದಲ್ಲಿನ ಹಾಳುಬಿದ್ದ ಮನೆಯಲ್ಲಿ ಅಡಗಿದ್ದ. ಈತನನ್ನು ಬಂಧಿಸಲು ಪೊಲೀಸರು ಹೋದಾಗ, ಅವರ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಲು ಮುಂದಾಗಿದ್ದ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಗ ಪೊಲೀಸರು ಗಾಳಿಯಲ್ಲಿ ಗುಂಡು(Firing) ಹಾರಿಸಿ ಎಚ್ಚರಿಕೆ ನೀಡಿದ್ದರು. ನಿಲ್ಲದೆ ಇದ್ದಾಗ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದರು. ಈ ಕುರಿತು ತನಿಖಾಧಿಕಾರಿ ವರದಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್‌ ಅವರು ಅಪರಾಧಿಗೆ 6 ವರ್ಷ ಜೈಲು ಶಿಕ್ಷೆ ಹಾಗೂ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ನರಸಿಂಹಲು ವಾದ ಮಂಡಿಸಿದ್ದರು.

ಬಾಲಕಿ ಮೇಲೆ ಅತ್ಯಾಚಾರ ಯತ್ನ: 3 ವರ್ಷ ಜೈಲು

ಕಲಬುರಗಿ:  ಬಾಲಕಿಯನ್ನು ಅಪಹರಿಸಿ(Kidnap) ಅತ್ಯಾಚಾರಕ್ಕೆ(Rape) ಯತ್ನಿಸಿದ ಆರೋಪಿಗೆ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು 3 ವರ್ಷ ಶಿಕ್ಷೆ ಮತ್ತು 45 ಸಾವಿರ ರು. ದಂಡ ವಿಧಿಸಿದ್ದಾರೆ.

Illegal in Exam: ಅಕ್ರಮ ಪರೀಕ್ಷೆ: ನಕಲಿ, ಅಸಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ಪ್ರಕಟ

2020ರಲ್ಲಿ ರಾತ್ರಿ ಮಹಿಳೆಯೊಬ್ಬರು(woman) ತನ್ನ 4 ವರ್ಷದ ಮಗಳನ್ನು ಕರೆದುಕೊಂಡು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು. ಬೆಳಗಿನ ಜಾವ ಪ್ರವೀಣ್‌ ಹಿರೇಮಠ ಎಂಬಾತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿ ಅಳುವ ಶಬ್ಧ ಕೇಳಿ ತಾಯಿ ಮಗುವನ್ನು ರಕ್ಷಿಸಿ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ಈ ದೂರಿನ ಅನ್ವಯ ಸಿಪಿಐ ಕಪೀಲದೇವ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ಬ್ರಹ್ಮಪುರ ಪೊಲೀಸ್‌ ಮುಖ್ಯಪೇದೆ ಸಂತೋಷಕುಮಾರ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು ಅಪರಾಧಿಗೆ 3 ವರ್ಷ ಶಿಕ್ಷೆ ಹಾಗೂ 45 ಸಾವಿರ ರು. ದಂಡ ವಿಧಿಸಿದ್ದಾರೆ.ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 1 ಲಕ್ಷ ಪರಿಹಾರ ಹಾಗೂ ದಂಡದ ಹಣದಲ್ಲಿ 40 ಸಾವಿರ ಬಾಲಕಿಗೆ ಕೊಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.
 

Latest Videos
Follow Us:
Download App:
  • android
  • ios