2017ರಲ್ಲಿ ಕೇರಳದ ಇರಿಟ್ಟಿಯಲ್ಲಿ ತನ್ನ 2ನೇ ಪತ್ನಿಯನ್ನು ಕೊಲೆ ಮಾಡಿ, ಆಕೆಯ ಇಬ್ಬರು ಮಕ್ಕಳನ್ನು ರೈಲಿನಲ್ಲಿ ಬಿಟ್ಟುಹೋದ ತುಮಕೂರಿನ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಘಟನೆಯು 'ಉಯಿರ್' ಎಂಬ ಮಲಯಾಳಂ ಚಲನಚಿತ್ರಕ್ಕೆ ಸ್ಫೂರ್ತಿಯಾಗಿತ್ತು.
ಕಣ್ಣೂರು (ಕೇರಳಂ): 2017ರಲ್ಲಿ ಕೇರಳಂನ ಇರಿಟ್ಟಿಯಲ್ಲಿ ತನ್ನ 2ನೇ ಪತ್ನಿಯನ್ನು ಕೊಲೆ ಮಾಡಿ, ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರೈಲಿನಲ್ಲಿ ಬಿಟ್ಟುಹೋದ ಕರ್ನಾಟಕದ ತುಮಕೂರಿನ ವ್ಯಕ್ತಿಯೊಬ್ಬನಿಗೆ ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರು.ವಿಧಿಸಿದೆ.
ತನ್ನ 2ನೇ ಪತ್ನಿಯನ್ನು ಕೊಲೆ ಮಾಡಿದ ಪಾತಕಿಯ ಕಥೆ!
ಜತೆಗೆ, ಒಟ್ಟು ದಂಡದ ಮೊತ್ತವು ವಸೂಲಾದ ನಂತರ, ಮೃತಳ ಇಬ್ಬರು ಅಪ್ರಾಪ್ತ ಮಕ್ಕಳಿಗೆ ತಲಾ 1.25 ಲಕ್ಷ ರು.ಗಳನ್ನು ಪರಿಹಾರವಾಗಿ ಪಾವತಿಸಬೇಕೆಂದು ಆದೇಶಿಸಿದೆ. ಇದೇ ವೇಳೆ ತನಿಖೆಯನ್ನು ಯಶಸ್ವಿಯಾಗಿ ನಡೆಸಿದ ತಂಡವನ್ನು ಶ್ಲಾಘಿಸಿದ ಕೋರ್ಟ್, ಸರ್ಕಲ್ ಇನ್‌ಸ್ಪೆಕ್ಟರ್ ಅನ್ಷದ್ ಅವರಿಗೆ ಸರ್ಕಾರಿ ಪ್ರಶಸ್ತಿ ನೀಡಬೇಕೆಂದು ಸೂಚಿಸಿದೆ.
ಉಯಿರ್’ ಎಂಬ ಮಲಯಾಳಂ ಚಲನಚಿತ್ರಕ್ಕೆ ಸ್ಫೂರ್ತಿ ಆಗಿದ್ದ ಘಟನೆ
ಈ ಕೊಲೆ ಪ್ರಕರಣವು ರೋಷನ್ ಮ್ಯಾಥ್ಯೂ ನಟಿಸಿದ ‘ಉಯಿರ್’ ಎಂಬ ಮಲಯಾಳಂ ಚಲನಚಿತ್ರಕ್ಕೆ ಸ್ಫೂರ್ತಿಯಾಗಿದ್ದು, ಈ ಚಿತ್ರವು ಈ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಿದೆ.
ತುಮಕೂರಿನ ಅಲೆಮಾರಿ ಸಮುದಾಯಕ್ಕೆ ಸೇರಿದ ಶೋಭಾ ಎಂಬ ಮಹಿಳೆಯ ಕೊಳೆತ ಸ್ಥಿತಿಯಲ್ಲಿದ್ದ ಶವ 2017ರ ಜ.21ರಂದು ಹಳೆಯ ಇರಿಟ್ಟಿ ಸೇತುವೆಯ ಬಳಿ ಬಾವಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ, ನಂತರದ ತನಿಖೆಯಲ್ಲಿ ಆಕೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಬಾವಿಗೆ ಎಸೆಯಲಾಗಿತ್ತು ಎಂಬುದು ದೃಢಪಟ್ಟಿತು.
ಮಂಜುನಾಥ ಮತ್ತು ಶೋಭಾ, ಆಕೆಯ ಇಬ್ಬರು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತಾ, ವಯನಾಡು ಮತ್ತು ಕಣ್ಣೂರಿನ ವಿವಿಧ ಭಾಗಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದರೆ ಶೋಭಾ, ಕರ್ನಾಟಕದಲ್ಲಿರುವ ತನ್ನ ಸ್ವಂತ ಊರಿಗೆ ಮರಳುವ ಮಂಜುನಾಥನ ಯೋಜನೆಯನ್ನು ವಿರೋಧಿಸಿದ್ದಲ್ಲದೆ, ತನ್ನ ಮೊದಲ ಪತಿ ರಾಜುವಿನ ಕೊಲೆಯಲ್ಲಿ ತಾವಿಬ್ಬರೂ ಭಾಗಿಯಾಗಿದ್ದ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಳು. ಈ ಕಾರಣದಿಂದ ಮಂಜುನಾಥ ಆಕೆಯನ್ನು ಕೊಂದು ಬಾವಿಯಲ್ಲಿ ಎಸೆದಿದ್ದ.
ನಂತರ, ಅವನು ಆಕೆಯ 5 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಅವರನ್ನು ಮುಂಬೈಗೆ ತೆರಳುವ ರೈಲಿನಲ್ಲಿ ಬಿಟ್ಟುಬಂದಿದ್ದ. ಬಳಿಕ ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿದ್ದರು. 2015ರಲ್ಲಿ ಮಂಜುನಾಥ್ ಮತ್ತು ಶೋಭಾ ಇಬ್ಬರೂ ಸೇರಿ ಆಕೆಯ ಮೊದಲ ಪತಿ ರಾಜುವನ್ನು ಕೊಲೆ ಮಾಡಿದ್ದು ಸಹ ತನಿಖೆಯಲ್ಲಿ ಬಯಲಾಗಿತ್ತು.












