Asianet Suvarna News Asianet Suvarna News

Belagavi: ಸವದತ್ತಿಯಲ್ಲಿ ಕತ್ತು ಕೊಯ್ದು ಪತ್ನಿ ಹತ್ಯೆಗೈದ ಪಾಪಿ ಪತಿ!

• ಅನೈತಿಕ ಸಂಬಂಧ ಶಂಕೆಯಿಂದ ಕತ್ತು ಸೀಳಿ ಪತ್ನಿ ಹತ್ಯೆಗೈದ ಪತಿ
• ಪತ್ನಿ ಹತ್ಯೆಗೈದು ಪೊಲೀಸ್‌‌ ಠಾಣೆಗೆ ಬಂದು ಶರಣಾದ ಪತಿ
• ಏನೂ ಅರಿಯದ ಇಬ್ಬರು ಪುಟ್ಟ ಮಕ್ಕಳು ಅನಾಥ

man kills wife for suspicion of illegal affair at savadatti in belagavi gvd
Author
Bangalore, First Published Aug 19, 2022, 3:35 AM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಆ.19): ಜಿಲ್ಲೆಯ ಸವದತ್ತಿ ಪಟ್ಟಣದ ಅಯ್ಯಪ್ಪಸ್ವಾಮಿ ನಗರ ನಿವಾಸಿಗಳು ಇಂದು ಬೆಳಗ್ಗೆ ಅಕ್ಷರಶಃ ಬೆಚ್ಚಿಬಿದ್ದಿದ್ದರು. ಪತಿ ಪತ್ನಿ ಮಧ್ಯೆ ಶುರುವಾಗಿದ್ದ ಜಗಳ ಅಲ್ಲಿ ಕೊಲೆಯಲ್ಲಿ ಅಂತ್ಯವಾಗಿತ್ತು. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ 28 ವರ್ಷದ ಶಬಾನಾಳನ್ನು ಆಕೆಯ ಪತಿ ಮೆಹಬೂಬ್‌ಸಾಬ್ ಚಾಕುವಿನಿಂದ ಕತ್ತು ಕೋಯ್ದು ಹತ್ಯೆ ಮಾಡಿದ್ದ. ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಮೆಹಬೂಬ್‌ಸಾಬ್‌ ಜೊತೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಶಬಾನಾಳನ್ನು ಕಳೆದ ಹತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. 

ಮೊದಲು ಮುನವಳ್ಳಿಯಲ್ಲೇ ಎಗ್ ರೈಸ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಮೆಹಬೂಬ್‌ಸಾಬ್ ಪತ್ನಿ ಜೊತೆ ಚೆನ್ನಾಗಿಯೇ ಇದ್ದ. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗು ಇತ್ತು‌. ಆದ್ರೆ ಕಳೆದ ಕೆಲ ವರ್ಷಗಳ ಹಿಂದೆ ಊರು ತೊರೆದು ಸವದತ್ತಿ ಪಟ್ಟಣಕ್ಕೆ ಬಂದು ಗೌಂಡಿ ಕೆಲಸ, ಐಸ್ ಕ್ರೀಂ ಮಾರಾಟ ಸೇರಿ ಸಣ್ಣಪುಟ್ಟ ಕೆಲಸ ಮಾಡ್ತಿದ್ದ‌ನಂತೆ. ಅಲ್ಲದೇ ಪತ್ನಿ ಶಬಾನಾಗೆ ನೀನೇ ಹೇಗಾದರೂ ಮಾಡಿ ದುಡಿದು ತಂದು ಹಾಕು ಅಂತಾ ಹೇಳುತ್ತಿದ್ದನಂತೆ. ಅಲ್ಲದೇ ಇತ್ತೀಚೆಗೆ ಕುಡಿತದ ಚಟವನ್ನು ಮೈಗೂಡಿಸಿಕೊಂಡಿದ್ದ ಈತ ಹೆಂಡತಿ ಶಬಾನಾ ಮೇಲೆ ವಿಪರೀತ ಸಂಶಯ ಪಡುತ್ತಿದ್ದನಂತೆ. 

ಜಮೀನು ವಿವಾದ; ತಹಶೀಲ್ದಾರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಅಲ್ಲದೇ ಇತ್ತೀಚೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಈತ ಪತ್ನಿ ಮತ್ತು ಮಗಳಿಗೆ ಸವದತ್ತಿಯ ಅಯ್ಯಪ್ಪಸ್ವಾಮಿ ನಗರದಲ್ಲಿ ಮನೆ ಮಾಡಿಕೊಟ್ಟಿದ್ದ. ಮಗನನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ ಈತ ಮಗಳನ್ನು ಪತ್ನಿಯ ಜೊತೆ ಬಿಟ್ಟಿದ್ದ. ಹೀಗಿದ್ದ ಈತ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದು ಪತ್ನಿ ಜೊತೆ ಜಗಳಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತನ್ನ ಆರು ವರ್ಷದ ಮಗಳ ಎದುರೇ ಪತ್ನಿಯ ಹತ್ಯೆಗೈದು ಬಳಿಕ ಸವದತ್ತಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಖಾನಾಪುರ ತಾಲೂಕಿನ ಬೀಡಿಯಲ್ಲಿ ವಾಸವಿದ್ದ ಶಬಾನಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಶಬಾನಾ ಕುಟುಂಬಸ್ಥರು ಬಂದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಹೆಂಡತಿಗೆ ದುಡಿದು ತಂದು ನನ್ನ ಸಾಕು ಅಂತಿದ್ದನಂತೆ ಪತಿ: ಬೀಡಿಯಿಂದ ಕೊಲೆಯಾದ ಶಬಾನಾ ಕುಟುಂಬಸ್ಥರು ಸವದತ್ತಿಗೆ ಬರಲು ಎರಡು ಗಂಟೆಗೂ ಹೆಚ್ಚು ಸಮಯ ಬೇಕಾಯಿತು. ಬಳಿಕ ಆಗಮಿಸಿದ ಶಬಾನಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಶಬಾನಾ ಸಂಬಂಧಿ ಮಕ್ತುಮ್, 'ಆರೋಪಿ ಮೆಹಬೂಬ್‌ಸಾಬ್ ಹೆಂಡತಿಗೆ ದುಡಿದು ತಂದು ನನ್ನ ಸಾಕು ಅಂತಾ ಕಿರಿಕಿರಿ ಕೊಡ್ತಿದ್ದ.‌ ಮದುವೆ ಆದ ನಾಲ್ಕು ವರ್ಷ ಎಗ್ ರೈಸ್ ಅಂಗಡಿ ಇಟ್ಟು ಚೆನ್ನಾಗಿಯೇ ಇದ್ದ. ಬಳಿಕ ಸಾಲಸೋಲ ಮಾಡಿ ಅದೇನಾಯ್ತೋ ಅಲೆಮಾರಿಯಂತೆ ಅಡ್ಡಾಡಲಾರಂಭಿಸಿದ. ಮುನವಳ್ಳಿ ಮುಸ್ಲಿಂ ಜಮಾತ್‌ನವರು ಸಹ ಈತನ ಕೃತ್ಯಕ್ಕೆ ಬೇಸತ್ತು ಹೊರ ಹಾಕಿದ್ದರು. ಮನೆ ಕೆಲಸ ಮಾಡಿ ಪಾತ್ರೆ ತೊಳೆದು ಹೇಗಾದರೂ ಮಕ್ಕಳನ್ನು ಶಬಾನಾ ಸಾಕುತ್ತಿದ್ದಳು‌.‌ ಇದೀಗ ಆಕೆಯನ್ನೇ ಕೊಲೆ ಮಾಡಿದ್ದು ಮಕ್ಕಳು ಅನಾಥರಾಗಿದ್ದಾರೆ. ಇಂತಹ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.

2 ದಿನಗಳ ಹಿಂದೆಯಷ್ಟೇ ತವರು ಮನೆಗೆ ಹೋಗೋಣ ಬಾ ಎಂದು ಕರೆದಿದ್ದಳಂತೆ ತಾಯಿ: ಇನ್ನು ಇದೇ ವೇಳೆ ಮಾತನಾಡಿದ ಶಬಾನಾ ತಾಯಿ ಹಸೀನಾ, 'ಇದೇ ಭಾನುವಾರವಷ್ಟೇ ನಾನು ಮಗಳ ಬಳಿ ಬಂದು ಇದ್ದು ಹೋಗಿದ್ದೆ. ಗಂಡ ಕಿರಿಕಿರಿ ಕೊಡುತ್ತಿದ್ದರೆ ನಮ್ಮೂರಿಗೆ ಬಾ ಹೋಗೋಣ ಎಂದಿದ್ದೆ. ಆದರೆ ಆಕೆ ಇಲ್ಲಿಯೇ ಇರ್ತೀನಿ ಎಂದಳು. ಕಳೆದ ನಾಲ್ಕು ವರ್ಷಗಳಿಂದ ಬಹಳ ಕಿರಿಕಿರಿ ಕೊಡುತ್ತಿದ್ದ. ಮಗಳು ತನ್ನ ಗಂಡನ ಕಿರಿಕಿರಿ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದು ಮಂಗಳವಾರ ವಾಪಸ್ ಹೋಗಿದ್ದೆ. ಎಲ್ಲಿಯಾದರೂ ಪಾತ್ರೆ ತೊಳೆದು ಜೀವನ ಸಾಗಿಸುತ್ತೇನೆ ಎಂದಿದ್ದಳು. 

ಎಂಟು ದಿನಗಳಿಂದ ಆತ ಮನೆಗೆ ಬಂದಿರಲಿಲ್ಲ. ಆತನೇ ಡೈವೋರ್ಸ್‌ಗೆ ಅಪ್ಲೈ ಮಾಡಿದ್ದ. ಅಷ್ಟೇ ಅಲ್ಲದೇ ಹದಿನೈದು ನೂರು ರೂಪಾಯಿ ಸೀರೆ ಇಟ್ಟುಕೊಂಡು ಧಾರವಾಡಕ್ಕೆ ಹೋಗು. ನಾಲ್ಕು ಜನರ ಜೊತೆ ಹೋದ್ರೆ ಎರಡು ಸಾವಿರ ರೂಪಾಯಿ ಆಗುತ್ತೆ ಅಂತಾ ಹೇಳ್ತಿದ್ದನಂತೆ. ನಾನು ಹಾಗೇ ಏಕೆ ಮಾಡಬೇಕು ಪಾತ್ರೆ ತೊಳೆದು ಜೀವನ ಸಾಗಿಸೋಣ ಅಂತಾ ಹೇಳುತ್ತಿದ್ದಳು. ಅಷ್ಟೇ ಅಲ್ಲದೇ ನಿನಗೆ ಬೇರೆಯವನ ಜೊತೆ ಸಂಬಂಧ ಇದೆ ಅಂತಾ ವಿಪರೀತ ಸಂಶಯವನ್ನು ಪಡುತ್ತಿದ್ದ. ಇಂದು ಬೆಳಗ್ಗೆ ನಮಗೆ ವಿಷಯ ಗೊತ್ತಾಯಿತು.‌ ಬಳಿಕ ಇಲ್ಲಿ ಬಂದಿದ್ದೇವೆ ಅಂತಾ ಹೇಳಿದ್ದಾರೆ‌.

ಕೀಳುಮಟ್ಟದ ರಾಜಕಾರಣ ಮಾಡಿದ್ದಕ್ಕೆ ಕಾಂಗ್ರೆಸ್‌ ಇಂದು ಮೂಲೆಗುಂಪಾಗಿದೆ: ಕಾರಜೋಳ

ಒಟ್ಟಾರೆಯಾಗಿ ವಿಚ್ಛೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದ ಪತಿ ತನ್ನ ಪತ್ನಿಯನ್ನು ಆಕೆಯ ಪಾಡಿಗೆ ಬಿಟ್ಟಿದ್ದರೆ ಹೇಗಾದರೂ ಮಾಡಿ ಆಕೆ ಜೀವನ ಸಾಗಿಸುತ್ತಿದ್ದಳು. ತಂದೆಯಿಂದಲೇ ತಾಯಿ ಕೊಲೆಗೀಡಾಗಿದ್ದರೆ, ತಂದೆ ಈಗ‌ ಜೈಲು ಪಾಲಾಗಿದ್ದಾನೆ. ಆದರೆ ಏನೂ ಅರಿಯದ ಎರಡು ಪುಟ್ಟ ಮಕ್ಕಳು ಇಂದು ಅನಾಥವಾಗಿದ್ದು, ಪಾಪಿ ಪತಿಗೆ ಊರಿನ ಜನ ಹಿಡಿಶಾಪ ಹಾಕುತ್ತಿದ್ದಾರೆ.

Follow Us:
Download App:
  • android
  • ios