'ಎಷ್ಟ್ ಪೌಡರ್ ಬಡ್ಕೊಂಡ್ರೂ ಹೀರೋಯಿನ್ ಆಗಲ್ಲ..' ಎನ್ನುತ್ತಿದ್ದ ಗಂಡ, ಕೃಷ್ಣವರ್ಣದ ಪತ್ನಿಯನ್ನು ಕೊಂದ!
ಹೆಂಡತಿ ಕಪ್ಪಗಿದ್ದಾಳೆ, ಹೀರೋಯಿನ್ ರೀತಿ ಇಲ್ಲ ಎಂದು ಟೀಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅದಲ್ಲದ, ಪತ್ನಿ ತನ್ನ ಸ್ಟೇಟಸ್‌ಗೆ ತಕ್ಕಂತಿಲ್ಲ ಎಂದೂ ಆತ ಹೇಳುತ್ತಿದ್ದ ಎಂದು ಆರೋಪಿಸಲಾಗಿದೆ.
ಕಲಬುರಗಿ (ಮಾ.3): ಹೆಂಡತಿಯ ಮೈಬಣ್ಣ ಕಪ್ಪು ಎನ್ನುವ ಕಾರಣಕ್ಕೆ, ಪತ್ನಿಯ ಕತ್ತು ಹಿಸುಕಿ ಕೊಂದ ವಿಲಕ್ಷಣ ಘಟನೆ ಜೇವರ್ಗಿ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಸಾವು ಕಂಡ ಮಹಿಳೆಯನ್ನು 28 ವರ್ಷದ ಫರ್ಜಾನಾ ಬೇಗಮ್ ಎಂದು ಗುರುತಿಸಲಾಗಿದ್ದು, ಯಾದಗಿರಿ ಜಿಲ್ಲೆಯ ಶಾಹಾಪುರ ತಾಲೂಕಿನವರು ಎನ್ನಲಾಗಿದೆ. ಆರೋಪಿಯಾಗಿರುವ ಖಾಜಾ ಪಟೇಲ್‌ನನ್ನು ಏಳು ವರ್ಷದ ಹಿಂದೆ ಫರ್ಜಾನಾ ಬೇಗಮ್ ವಿವಾಹವಾಗಿದ್ದರು. ಇವರಿಗೆ 4 ವರ್ಷ ಹಾಗೂ 2 ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ಫರ್ಜಾನಾ ಅವರ ಸಂಬಂಧಿ ಖುರ್ಷಿದ್ ಹೇಳಿದ್ದಾರೆ. ಫರ್ಜಾನಾ ಅವರ ಮೈಬಣ್ಣದ ಬಗ್ಗೆ ಯಾವಾಗಲೂ ಖಾಜಾ ಪಟೇಲ್ ಕೊಂಕು ಮಾತನಾಡುತ್ತಿದ್ದ. ಮುಖಕ್ಕೆ ಅದೆಷ್ಟೇ ಪೌಡರ್ ಬಡಿದುಕೊಂಡರೂ ನೀನು ಹೀರೋಯಿನ್ ಆಗೋಕೆ ಸಾಧ್ಯವಿಲ್ಲ ಎಂದು ಆಕೆಗೆ ಮಾತಿನಲ್ಲಿಯೇ ತಿವಿಯುತ್ತಿದ್ದ. ಈ ವಿಷಯವನ್ನು ಫರ್ಜಾನಾ ತನ್ನ ಕುಟುಂಬದವರ ಗಮನಕ್ಕೆ ತಂದಿದ್ದರು. ಖಾಜಾ ಪಟೇಲ್ ಅಲ್ಲದೆ, ಅವರ ಕುಟುಂಬ ಸದಸ್ಯರು ಕೂಡ ಫರ್ಜಾನಾ ಅವರಿಗೆ ಕಿರುಕುಳ ನೀಡುತ್ತಿದ್ದರು. ಪ್ರತಿ ದಿನವೂ ವರದಕ್ಷಿಣೆ ವಿಚಾರವಾಗಿ ಗಲಾಟೆಗಳು ಆಗುತ್ತಿದ್ದವು. ಫರ್ಜಾನಾ ಎಂದಿಗೂ ನಮ್ಮ ಕುಟುಂಬದ ಘನತೆಗೆ ತಕ್ಕ ಹೆಂಗಸಲ್ಲ ಎಂದು ಹೇಳುತ್ತಿದ್ದರು ಎಂದು ಖುರ್ಷಿದ್ ಹೇಳಿದ್ದಾರೆ.
ಫರ್ಜಾನಾ ಅವರ ಸಾವಿನ ಬಗ್ಗೆ ಕೆಲ್ಲೂರು ಗ್ರಾಮದ ಹಾಲು ಮಾರುವ ವ್ಯಕ್ತಿ ಖುರ್ಷಿದ್‌ಗೆ ಮಾಹಿತಿ ನೀಡಿದ್ದ. ಆ ಬಳಿಕವೇ ಈ ಘಟನೆ ಬೆಳಕಿಗೆ ಬಂದಿದೆ. ಫರ್ಜಾನಾ ಅವರ ಕುಟುಂಬದೊಂದಿಗೆ ಖುರ್ಷಿದ್ ಕೆಲ್ಲೂರ್ ಗ್ರಾಮಕ್ಕೆ ತೆರಳಿದ್ದಾಗ, ಫರ್ಜಾನಾ ಅವರ ಇಬ್ಬರು ಮಕ್ಕಳು ತಾಯಿಯ ಶವದ ಬಳಿ ಕುಳಿತಿದ್ದರು ಎಂದು ಹೇಳಲಾಗಿದೆ.
ಪರಾರಿಯಾದ ಖಾಜಾ ಕುಟುಂಬ: ಖಾಜಾ ಪಟೇಲ್ ವಿರುದ್ಧ ಕುಟುಂಬದವರು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ. ಕಲಬುರಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶಹಾಪುರದಲ್ಲಿ ಮೃತಳ ಅಂತಿಮ ಸಂಸ್ಕಾರ ನಡೆಸಲಾಯಿತು. ಫರ್ಜಾನಾ ಅವರ ಮನೆಯವರು ತಮ್ಮ ಇಬ್ಬರು ಮಕ್ಕಳನ್ನು ಶಹಾಪುರಕ್ಕೆ ಕರೆತಂದಿದ್ದಾರೆ ಎಂದು ಖುರ್ಷಿದ್ ಮಾಹಿತಿ ನೀಡಿದ್ದಾರೆ.
5 ಮದ್ವೆಯಾದವ 5ನೇ ಹೆಂಡ್ತಿಯಿಂದ ಬರ್ಬರವಾಗಿ ಹತ್ಯೆಯಾದ: ಮರ್ಮಾಂಗ ಕತ್ತರಿಸಿ ಎಸೆದ ಪತ್ನಿ
ಕಲಬುರಗಿ ಗ್ರಾಮಾಂತರ ಡಿವೈಎಸ್ಪಿ ಉಮೇಶ ಚಿಕ್ಕಮಠ ಮಾತನಾಡಿ, ವರದಕ್ಷಿಣೆ ಸಾವು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿಸಿದರು.
ಪಾಂಡೇಶ್ವರ ಠಾಣೆ ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಶ್ರೀಲತಾ ಅಮಾನತ್ತು
ಏತನ್ಮಧ್ಯೆ, ಫರ್ಜಾನಾ ಸಾವಿನ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಜೆಎಂಎಸ್ ತಂಡವನ್ನು ಕೆಲ್ಲೂರಿಗೆ ಕಳುಹಿಸಲಿದೆ ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ರಾಜ್ಯ ಘಟಕದ ಉಪಾಧ್ಯಕ್ಷೆ ನೀಲಾ ಕೆ ತಿಳಿಸಿದ್ದಾರೆ. "ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಮತ್ತು ಚಿತ್ರಹಿಂಸೆ ಆರೋಪಗಳು ನಿಜವಾಗಿದ್ದರೂ, ಸಾವನ್ನು ಕೊಲೆ ಎಂದು ಪರಿಗಣಿಸಲಾಗುತ್ತದೆ" ಎಂದು ಅವರು ಹೇಳಿದರು. ಮಹಿಳಾ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.