ಆನೇಕಲ್‌[ಅ.10]: ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗುಂಡು ಹಾರಿಸಿ ಕೊಂದ ಘಟನೆ ಬೆಂಗಳೂರು ದಕ್ಷಿಣ ಜಿಗಣಿ ಠಾಣಾ ವ್ಯಾಪ್ತಿಯ ಶ್ರೀರಾಮಪುರದಲ್ಲಿ ನಡೆದಿದೆ.

ರಮೇಶ್‌(35) ಕೊಲೆಯಾದವ. ಮುನಿಯಪ್ಪ ಗುಂಡು ಹಾರಿಸಿ ಕೊಲೆ ಮಾಡಿ ಪೊಲೀಸರಿಗೆ ಅತಿಥಿಯಾಗಿದ್ದಾನೆ.

ಕೊಲೆಗಾರ ಮುನಿಯಪ್ಪ ಹಾಗೂ ಕೊಲೆಯಾದ ರಮೇಶ ಇಬ್ಬರೂ ಶ್ರೀರಾಮಪುರದವರು. 2 ವರ್ಷಗಳ ಹಿಂದೆ ರಮೇಶನ ಮಗನ ಹಟ್ಟುಹಬ್ಬ ನೆಪದಲ್ಲಿ ಮನೆಗೆ ಬಂದ ಮುನಿಯಪ್ಪ ರಮೇಶ್‌ನ ಪತ್ನಿ ಕಲಾಳನ್ನು ಮರುಳು ಮಾಡಿದ್ದ. ಸಲುಗೆ ಕೊಟ್ಟಕಲಾ 6 ತಿಂಗಳ ಹಿಂದೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುನಿಯಪ್ಪನ ಜೊತೆ ಹೋಗಿದ್ದಳು. ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ನಡೆದರೂ ವಿಚ್ಛೇದನಕ್ಕೆ ಕಲಾ ಮುಂದಾಗಿದ್ದಳು.

ರಮೇಶ ನಡೆದುಕೊಂಡು ಹೋಗುತ್ತಿದ್ದಾಗ ಮುನಿಯಪ್ಪ ಮನೆಯ್ಲಲ್ಲಿದ್ದ ಡಬ್ಬಲ್‌ ಬ್ಯಾರಲ್‌ ಗನ್‌ ತಂದು ರಮೇಶನ ಎದೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿದ ನೆರೆ ಹೊರೆ ಮನೆಯವರು ಹೊರಕ್ಕೆ ಬಂದಾಗ ರಮೇಶ ರಕ್ತದ ಮಡುನಲ್ಲಿ ಬಿದ್ದು ಒದ್ದಾಡುತ್ತಿದ್ದ. ಅವನನ್ನು ಆಸ್ಪತ್ರೆಗೆ ಸೇರಿಸಲು ಬಂದಾಗ ಗ್ರಾಮಸ್ಥರರಿಗೆ ಬಂದೂಕು ತೋರಿಸಿ ಯಾರೂ ಹತ್ತಿರಕ್ಕೆ ಬರಬಾರದು ಎಂದು ಮುನಿಯಪ್ಪ ಅವಾಜ್‌ ಹಾಕಿದ್ದಾನೆ.

ಮೊಬೈಲ್‌ ಕರೆಯಿಂದ ಘಟನೆ ಬಗ್ಗೆ ಅರಿತ ಜಿಗಣಿ ಪೊಲಿಸರು ಘಟನಾ ಸ್ಥಳಕ್ಕೆ ಧಾಸಿ ಬಂದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಂತರ ಆರೋಪಿಯನ್ನು ಬಂದೂಕು ಸಹಿತ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.