ಸಂಭ್ರಮದ ರಥೋತ್ಸವದ ನಡುವೆ ಅವಘಡ, ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವು
* ಸಂಭ್ರಮದ ರಥೋತ್ಸವದ ನಡುವೆ ಅವಘಡ
* ರಥದ ಚಕ್ರಕ್ಕೆ ಸಿಲುಕಿ ಹಾರಿಹೋದ ಪ್ರಾಣಪಕ್ಷಿ
* ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂಧನ
ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ, (ಮೇ.15): ಅಲ್ಲಿ ಎರಡು ವರ್ಷಗಳ ನಂತರ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಸಾವಿರಾರು ಜನ ದೇವರ ದರ್ಶನಕ್ಕೆ ಬಂದಿದ್ದರು. ದೇವಿಯ ರಥ ಎಳೆಯುವ ಭರದಲ್ಲಿ ನೂಕು ನುಗ್ಗಲಾಯ್ತು. ಕ್ಷಣಾರ್ಧದಲ್ಲಿ ದುರಂತವೊಂದು ನಡೆದು ಸಂಭ್ರಮ ಮಾಯವಾಗಿ ಸೂತಕದ ಛಾಯೆ ಆವರಿಸಿತು. ಅಷ್ಟಕ್ಕು ಅಲ್ಲೇನಾಯ್ತು?
ಹೌದು.. ಇಂತಹ ಒಂದು ದುರ್ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಕೊರೋನಾ ಮಹಾಮಾರಿಯ ಅಟ್ಟಹಾಸದ ಪರಿಣಾಮ ರಾಜ್ಯದಲ್ಲಿ ಎರಡು ವರ್ಷಗಳಿಂದ ಜಾತ್ರಾ ಸಂಭ್ರಮಗಳಿಗೆ ಗರ ಬಡಿದಿತ್ತು. ರಥೋತ್ಸವಗಳು ಸ್ಥಗಿತಗೊಂಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕೊರೋನಾದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಮತ್ತೆ ಹಬ್ಬ ಹರಿದಿನಗಳಿಗೆ ಜೀವ ಬಂದಿದೆ.
"
ಸಾವಿನಲ್ಲಿ ಒಂದಾದ ಪ್ರೇಮಿಗಳು, ಪ್ರೀಯಕರನ ಸಮಾಧಿ ಪಕ್ಕದಲ್ಲಿ ಯುವತಿಯ ಅಂತ್ಯಕ್ರಿಯೆ
ಜಾತ್ರಾ ಮಹೋತ್ಸವಗಳು ಗರಿಗೆದರಿವೆ. ಇದೇ ರೀತಿ ಕಳೆದು ಎರಡು ವರ್ಷಗಳಿಂದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಕಂದೇಗಾಲದ ಪಾರ್ವತಿಬೆಟ್ಟದಲ್ಲಿ ಪಾರ್ವತಾಂಭ ರಥೋತ್ಸವ ಸ್ಥಗಿತಗೊಂಡಿತ್ತು. ಇತ್ತೀಚೆಗೆ ಸರ್ಕಾರ ಕೊರೋನಾ ನಿರ್ಬಂಧಗಳನ್ನು ತೆರವು ಗೊಳಿಸಿದ ಹಿನ್ನಲೆ ಸಹಸ್ರಾರು ಜನರ ಆರಾಧ್ಯ ದೈವ ಪಾರ್ವತಾಂಭೆಯ ರಥೋತ್ಸವ ನಡೆಸಲು ಗ್ರಾಮಸ್ಥರು ತೀರ್ಮಾನಿಸಿ ಇಂದು(ಭಾನುವಾರ) ವಿಜೃಂಭಣೆ ಜಾತ್ರಾ ಮಹೋತ್ಸವವೇನೋ ಜರುಗತೊಡಗಿತ್ತು.
ಬಹಳ ದಿನಗಳ ನಂತರ ಜಾತ್ರೆ ನಡೆಯುತ್ತಿದ್ದರಿಂದ ಸುತ್ತಮುತ್ತಲ ಹಳ್ಳಿಗಳಿಂದ ಸಹಸ್ರಾರು ಜನ ಭಾಗವಹಿಸಿದ್ದರು. ನಾ ಮುಂದು ತಾ ಮುಂದು ಎನ್ನುತ್ತಾ ಪಾರ್ವತಾಂಭೆಯ ರಥ ಎಳೆಯಲು ಮುನ್ನುಗ್ಗತೊಡಗಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ರಥದ ಚಕ್ರ ಓರ್ವನ ಹೊಟ್ಟೆಯ ಮೇಲೆ ಹರಿದರೆ ಇನ್ನಿಬ್ಬರ ತೊಡೆಯಮೇಲೆ ಹರಿಯಿತು. ತಕ್ಷಣ ಆ್ಯಂಬುಲೆನ್ಸ್‌ನಲ್ಲಿ ಮೂವರನ್ನು ಗುಂಡ್ಲುಪೇಟೆ ಆಸ್ಪತ್ರೆ ಗೆ ಸಾಗಿಸುವಾಗ ಮಾರ್ಗಮದ್ಯೆ ಹೊಟ್ಟೆ ಮೇಲೆ ಚಕ್ರ ಹರಿದಿದ್ದ ಓರ್ವನ ಪ್ರಾಣಪಕ್ಷಿ ಹಾರಿಹೋಗಿದೆ.
ಕಂದೇಗಾಲ ಗ್ರಾಮದ ಸರ್ಪಭೂಷಣ ಎಂಬ 23 ವರ್ಷದ ಯುವಕ ರಥ ಎಳೆಯಲು ಹೋಗಿ ಚಕ್ರದ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇದೇ ಗ್ರಾಮ್ ಕಬ್ಬಳ್ಳಿ ಸ್ವಾಮಿ ಹಾಗು ಪಕ್ಕದ ಗ್ರಾಮದ ಕೊಡಸೋಗೆ ಕರಿನಾಯಕ ಎಂಬುವರ ಕಾಲಿನ ಮೇಲೆ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ಗುಂಡ್ಲುಪೇಟೆ ತಾಲೋಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ..
ಪಾರ್ವತಾಂಬೆಯ ಜಾತ್ರಾ ಮಹೋತ್ಸವಕ್ಕೆ ಸಾಕಷ್ಟು ಜನ ಬರುತ್ತಾರೆಂದು ಗೊತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದು ಇಲ್ಲಿ ಎದ್ದು ಕಾಣುತ್ತಿದೆ. ನೂಕು ನುಗ್ಗಲು ಉಂಟಾಗದಂತೆ ಸುಸೂತ್ರವಾಗಿ ರಥ ಎಳೆಯಲು ಅನುಕೂಲವಾಗುವಂತೆ ಬಂದೋಬಸ್ತ್ ಮಾಡುವಲ್ಲಿ ಪೊಲೀಸರು ಎಡವಿದ್ದಾರೆ.