ಬಿರಿಯಾನಿಗೆ ರಾಯಿತಾ ಕೇಳಿದ್ದಕ್ಕೆ ಥಳಿಸಿದ ಹೋಟೆಲ್ ಸಿಬ್ಬಂದಿ: ಕೆಲವೇ ಕ್ಷಣದಲ್ಲಿ ಗ್ರಾಹಕ ಸಾವು!
ಬಿರಿಯಾನಿಗೆ ಎಕ್ಸ್ಟ್ರಾ ರಾಯಿತಾ ಕೇಳ್ದ ಅಂತ ಹೋಟೆಲ್ ಸಿಬ್ಬಂದಿ ಗ್ರಾಹಕನನ್ನು ಥಳಿಸಿದ್ದು, ಆತ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್ (ಸೆಪ್ಟೆಂಬರ್ 11, 2023): ಹೈದರಾಬಾದ್‌ನಲ್ಲಿ 32 ವರ್ಷದ ವ್ಯಕ್ತಿಯನ್ನು ಹೋಟೆಲ್‌ವೊಂದರಲ್ಲಿ ಅಲ್ಲಿನ ಸಿಬ್ಬಂದಿಯೇ ಹೊಡೆದು ಕೊಂದಿದ್ದಾರೆ. ಇದಕ್ಕೆ ಕಾರಣ ಆತ ಬಿರಿಯಾನಿಗೆ ಎಕ್ಸ್ಟ್ರಾ ರಾಯಿತಾ ಕೇಳ್ದ ಅಂತ. ಭಾನುವಾರ ರಾತ್ರಿ ಪುಂಜಗುಟ್ಟಾ ಪ್ರದೇಶದ ಮೆರಿಡಿಯನ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ.
32 ವರ್ಷದ ವ್ಯಕ್ತಿ ಪ್ರಸಿದ್ಧ ಬಿರಿಯಾನಿ ಜಾಯಿಂಟ್‌ನಲ್ಲಿ ಹೆಚ್ಚುವರಿ ರಾಯಿತಾ ಅಂದರೆ ಬಿರಿಯಾನಿಯೊಂದಿಗೆ ಬಡಿಸುವ ಭಕ್ಷ್ಯ ಕೇಳಿದ್ದಕ್ಕೆ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಗ್ರಾಹಕನ ಸಾವಿಗೆ ಕಾರಣವಾಯಿತು.
ಇದನ್ನು ಓದಿ: ವಿಮಾನದ ಲೈಟ್ ಆಫ್ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ
ಮೃತನನ್ನು ಲಿಯಾಕತ್ ಎಂದು ಗುರುತಿಸಲಾಗಿದ್ದು, ಸ್ನೇಹಿತರ ಗುಂಪಿನೊಂದಿಗೆ ರೆಸ್ಟೋರೆಂಟ್‌ನಲ್ಲಿದ್ದಾಗ, ಅತ ಸ್ವಲ್ಪ ಹೆಚ್ಚುವರಿ ರಾಯಿತಾ ಕೇಳಿದ ನಂತರ ಹೋಟೆಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಈ ವಾದವು ಉಲ್ಬಣಗೊಂಡಿದ್ದು, ತ್ವರಿತವಾಗಿ ಹಿಂಸಾಚಾರಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎರಡೂ ಗುಂಪಿನ ವ್ಯಕ್ತಿಗಳು ಪರಸ್ಪರ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಹೋಟೆಲ್‌ನ ಮ್ಯಾನೇಜರ್ ಸೇರಿದಂತೆ ಹೋಟೆಲ್ ಸಿಬ್ಬಂದಿ ಲಿಕಾಯತ್‌ಗೆ ತೀವ್ರವಾಗಿ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ನಂತರ ಈ ವಾದ ವಿವಾದ ರಾತ್ರಿ 11 ಗಂಟೆ ಸುಮಾರಿಗೆ ಪಂಜಗುಟ್ಟ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಲ್ಲಿಯೇ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಯ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?
ಆದರೂ, ಲಿಯಾಕತ್ ಅವರು ಪೊಲೀಸರನ್ನು ಸಮೀಪಿಸುತ್ತಿದ್ದಂತೆ ಉಸಿರಾಟ ಮತ್ತು ಎದೆ ನೋವು ಎಂದು ದೂರಿದರು ಮತ್ತು ಕೆಲವೇ ನಿಮಿಷಗಳಲ್ಲಿ ನೆಲದ ಮೇಲೆ ಕುಸಿದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಬಳಿಕ, ಪೊಲೀಸರು ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಹೃದಯ ಸ್ತಂಭನದ ಪ್ರಕರಣ ಎಂದು ವೈದ್ಯರು ಶಂಕಿಸಿದ್ದು, ಆದರೆ ವರದಿಗಳು ಹೊರಬಂದ ನಂತರ ವ್ಯಕ್ತಿಯ ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಲಾಗಿದೆ. ಈ ಮಧ್ಯೆ, ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: 45 ಮಹಿಳೆಯರ ರೇಪ್; ಶಿಕ್ಷಕಿ ಜತೆ ರಾಸಲೀಲೆ: ಕಾಮುಕ ಪ್ರಿನ್ಸಿಪಾಲ್ ವಿಡಿಯೋ ವೈರಲ್