ಆರೋಪಿ ಶಕೀಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಿದ್ದು, ರಿಯಲ್‌ ಎಸ್ಟೇಟ್‌ ವ್ಯವಹಾರ ವೃದ್ಧಿಸಲು ಅಪಾರ ಹಣ ಗಳಿಸುವ ಉದ್ದೇಶದಿಂದ ಪಿಸ್ತೂಲ್‌ ಸ್ಮಗ್ಲಿಂಗ್‌ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 

ಬೆಂಗಳೂರು (ಮಾ. 21): ಅಪಾರ ಹಣ ಗಳಿಸುವ ಉದ್ದೇಶದಿಂದ ನೆರೆಯ ಮಹಾರಾಷ್ಟ್ರದಿಂದ ಅಕ್ರಮವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡು ತಂದು ದುಬಾರಿ ದರಕ್ಕೆ ಮಾರಾಟಕ್ಕೆ ಯತ್ನಿಸುತ್ತಿದ್ದ ರಿಯಲ್‌ ಎಸ್ಟೇಟ್‌ ಬ್ರೋಕರ್‌ನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ಸಮೀದ ಕನಕನಗರದ ಶಕೀಲ್‌ ಅಹಮ್ಮದ್‌(29) ಬಂಧಿತ. ಈತನಿಂದ ಎರಡು ಪಿಸ್ತೂಲ್‌ ಹಾಗೂ ನಾಲ್ಕು ಜೀವಂತ ಗುಂಡು ಜಪ್ತಿ ಮಾಡಲಾಗಿದೆ. ರೌಡಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪಿಸ್ತೂಲ್‌ ಹಾಗೂ ಜೀವಂತ ಗುಂಡು ಮಾರಾಟ ಮಾಡಲು ಮಾ.19ರಂದು ಬಾಣಸವಾಡಿ ರೈಲು ನಿಲ್ದಾಣದ ಬಳಿ ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಶಕೀಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಿದ್ದು, ರಿಯಲ್‌ ಎಸ್ಟೇಟ್‌ ವ್ಯವಹಾರ ವೃದ್ಧಿಸಲು ಅಪಾರ ಹಣ ಗಳಿಸುವ ಉದ್ದೇಶದಿಂದ ಪಿಸ್ತೂಲ್‌ ಸ್ಮಗ್ಲಿಂಗ್‌ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಮಹಾರಾಷ್ಟ್ರದ ಅಮರಾವತಿಯಿಂದ ಕಡಿಮೆ ದರಕ್ಕೆ ಪಿಸ್ತೂಲ್‌ ಹಾಗೂ ಜೀವಂತ ಗುಂಡು ಖರೀದಿಸಿ ನಗರಕ್ಕೆ ತರುತ್ತಿದ್ದ. ಬಳಿಕ ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಸಂಪರ್ಕಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿHubballi: ಮೂವರು ನಟೋರಿಯಸ್ ದರೋಡೆಕೋರರ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಪುರಾತನ ಕಾಲದ ವಿಷ್ಣು ವಿಗ್ರಹ ಸ್ಮಗ್ಲಿಂಗ್‌ಗೆ ಯತ್ನ: ಪುರಾತನ ಕಾಲದ ಕಂಚಿನ ವಿಷ್ಣು ವಿಗ್ರಹವನ್ನು ಅಕ್ರಮವಾಗಿ ಮಲೇಷ್ಯಾಗೆ ಸಾಗಿಸಲು ಯತ್ನಿಸಿದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಕಾರ್ಗೊ ಗುಪ್ತಚರ ಘಟಕದ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

22.5 ಕೆ.ಜಿ. ತೂಕದ ವಿಷ್ಣುವಿನ ಈ ವಿಗ್ರಹವು 62.5 ಸೆ.ಮೀ. ಉದ್ದ ಹಾಗೂ 20 ಸೆ.ಮೀ. ಅಗಲವಿದೆ. ವ್ಯಕ್ತಿಯೊಬ್ಬ ಸರಕು ಸಾಗಾಣೆ ನೆಪದಲ್ಲಿ ಈ ವಿಗ್ರಹವನ್ನು ಬಚ್ಚಿಟ್ಟುಕೊಂಡು ಅಕ್ರಮವಾಗಿ ಮಲೇಷ್ಯಾಗೆ ಸಾಗಿಸಲು ವಿಮಾನ ನಿಲ್ದಾಣಕ್ಕೆ ತಂದಿದ್ದಾನೆ. ಏರ್‌ ಕಾರ್ಗೊ ಗುಪ್ತಚರ ಘಟಕದ ಅಧಿಕಾರಿಗಳು ಸರಕುಗಳ ತಪಾಸಣೆ ಮಾಡುವಾಗ ಈ ವಿಗ್ರಹ ಪತ್ತೆಯಾಗಿದೆ. 

ಇದನ್ನೂ ಓದಿ:Bengaluru Crime: ಸ್ಟೀಲ್‌ ಡಬ್ಬಿಗಳಲ್ಲಿ ತುಂಬಿದ್ದ 9.23 ಕೋಟಿ ಡ್ರಗ್ಸ್‌ ವಶ

ಬಳಿಕ ವಿಗ್ರಹ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಈ ವಿಗ್ರಹವು ಪುರಾತನ ಕಾಲದ ವಿಗ್ರಹ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ದೃಢೀಕರಿಸಿದ್ದಾರೆ. ಈ ಸಂಬಂಧ 1972ರ ಪ್ರಾಚ್ಯ ಸಂಪತ್ತು ಕಾಯ್ದೆ 24ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣ ಕಾರ್ಗೊ ಗುಪ್ತಚರ ಘಟಕದ ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ಕುದುರೆ ರೇಸ್‌ ಬೆಟ್ಟಿಂಗ್‌ ಆಡುತ್ತಿದ್ದವರ ಸೆರೆ: ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಲ್ಲೇಶ್ವರ 16ನೇ ಕ್ರಾಸ್‌ನ ಹರೀಶ್‌(40), ವಿಕಾಶ್‌ ಶಣೈ(44) ಹಾಗೂ ಎನ್‌.ರಘುನಂದನ್‌(52) ಬಂಧಿತರು. ಆರೋಪಿಗಳಿಂದ 5.50 ಲಕ್ಷ ರು. ಹಣ, 10 ಮೊಬೈಲ್‌ಗಳು ಹಾಗೂ ಒಂದು ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. 

ಆರೋಪಿಗಳು ಮಾ.19ರಂದು ಮಲ್ಲೇಶ್ವರದ 16ನೇ ಕ್ರಾಸ್‌ನ ಮನೆಯೊಂದರಲ್ಲಿ ಬೆಂಗಳೂರಿನಲ್ಲಿ ನಡೆಯುವ ಕುದುರೆ ರೇಸ್‌ ಬಗ್ಗೆ ಆ್ಯಪ್‌ಗಳಲ್ಲಿ ಬೆಟ್ಟಿಂಗ್‌ ಕಟ್ಟಿಸಿಕೊಂಡು ಅಕ್ರಮವಾಗಿ ಜೂಜಾಡಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಈ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.